ಲಾರಿಯಿಂದ ಮನೆಗೆ ಹಾನಿ: ಪ್ರಶ್ನಿಸಿದ್ದಕ್ಕೆ ತಂಡದಿಂದ ವ್ಯಕ್ತಿಗೆ ಹಲ್ಲೆ
Update: 2016-05-21 18:18 IST
ಬಂಟ್ವಾಳ, ಮೇ 21: ಮನೆಯ ಗೋಡೆಗೆ ಲಾರಿಯೊಂದು ಹಾನಿಗೊಳಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ತಂಡಯೊಂದು ವ್ಯಕ್ತಿಯೊಬ್ಬರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳಂತೂರು ಗ್ರಾಮದ ಕಲ್ಪನೆ ನಿವಾಸಿ ಅಬೂಬಕರ್ ಎಂಬವರ ಪುತ್ರ ಮುಹಮ್ಮದ್ ಹನೀಫ್ ಹಲ್ಲೆಗೊಳಗಾದವರು. ಇವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹನೀಫ್‌ರ ಮನೆಯ ಅಂಗಳದಲ್ಲಿ ಲಾರಿಯೊಂದು ತಿರುಗುವಾಗ ಅವರ ಮನೆಗೆ ಹಾನಿ ಉಂಟಾಗಿದೆ. ಈ ಬಗ್ಗೆ ಹನೀಫ್‌ರ ತಂದೆ ಅಬೂಬಕರ್ ಲಾರಿ ಚಾಲಕನನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ. ಇದೇ ವಿಚಾರದಲ್ಲಿ ಮರುದಿನ ಸ್ಥಳೀಯ ನಿವಾಸಿಗಳಾದ ಕರೀಂ, ಅಬ್ದುರ್ರಹೀಂ, ಹಾರೀಶ್, ಮುಹಮ್ಮದ್, ಅನ್ಸಾರ್ ಎಂಬವರು ಮನೆಗೆ ಬಂದು ಹನೀಫ್‌ಗೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹನೀಫ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.