×
Ad

ಮಂಗಳೂರು ವಿಮಾನ ದುರಂತದಲ್ಲಿ ಮಡಿದವರ ಸ್ಮರಣಾರ್ಥ ತಣ್ಣೀರುಬಾವಿಯಲ್ಲಿ ಪಾರ್ಕ್ ನಿರ್ಮಾಣ

Update: 2016-05-21 19:03 IST

ಮಂಗಳೂರು, ಮೇ 21: ಮಂಗಳೂರು ವಿಮಾನ ಮಹಾದುರಂತ ನಡೆದು ಮೇ 22ಕ್ಕೆ ಆರು ವರ್ಷ ತುಂಬಿದ ಸಂದರ್ಭದಲ್ಲಿ 22/5 ಸ್ಮಾರಕ ಪಾರ್ಕ್ ಕೂಳೂರು ತಣ್ಣೀರುಬಾವಿ ಕಿನಾರೆ ಸಮೀಪ ಪ್ರಾರಂಭವಾಗಿದೆ.

2010ರ ಮೇ 22 ರ ಮುಂಜಾನೆ ಸಂಭವಿಸಿದ ವಿಮಾನ ಮಹಾದುರಂತದಲ್ಲಿ ಸಾವನ್ನಪ್ಪಿದ 158 ಮಂದಿಯಲ್ಲಿ 12 ಮಂದಿಯ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮೃತದೇಹಗಳನ್ನು ತಣ್ಣೀರು ಬಾವಿ ಸಮುದ್ರ ಕಿನಾರೆಯ ಸಮೀಪ ಜಿಲ್ಲಾಡಳಿತದ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಈ ಪ್ರದೇಶದಲ್ಲಿ ದುರಂತ ನಡೆದ ದಿನಾಂಕ ಮತ್ತು ತಿಂಗಳನ್ನು ಸೂಚಿಸುವ 22/5 ಪಾರ್ಕ್ ನಿರ್ಮಿಸಲು ಜಿಲ್ಲಾಡಳಿತ ಎನ್ಎಂಪಿಟಿಗೆ ವಿನಂತಿಸಿದ ಮೇರೆಗೆ 30 ಲಕ್ಷ ರೂ.ವೆಚ್ಚದಲ್ಲಿ ಸ್ಮಾರಕ ಪಾರ್ಕ್ ನಿರ್ಮಾಣವಾಗಿದೆ. 90 ಸೆಂಟ್ಸ್ ಜಾಗದಲ್ಲಿ ಜಿಲ್ಲಾಡಳಿತ ಸಹಯೋಗದೊಂದಿಗೆ ಇದನ್ನು ನಿರ್ಮಿಸಲಾಗಿದೆ. ಪಾರ್ಕ್‌ಗೆ ಅಗತ್ಯ ಗಿಡ, ಮರಗಳನ್ನು ಬೆಳೆಸಲಾಗಿದೆ. ಇಲ್ಲಿ ದುರಂತದ ನೆನಪಿಗಾಗಿ ಪ್ರತಿಮೆಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಮೇ.22 ರಂದು ಬೆಳಗ್ಗೆ 10:30ಕ್ಕೆ ಇದೇ ಸ್ಮಾರಕ ಪಾರ್ಕ್‌ನಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಶೃದ್ದಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

6 ವರ್ಷವಾದರೂ ನ್ಯಾಯಯುತ ಪರಿಹಾರ ಕೈಸೇರಿಲ್ಲ

ಮಂಗಳೂರು ವಿಮಾನ ಅಪಘಾತ ನಡೆದು ಆರು ವರ್ಷಗಳಾದರೂ ತಮ್ಮವರನ್ನು ಕಳೆದುಕೊಂಡವರು ನ್ಯಾಯಯುತ ಕನಿಷ್ಠ ಸಮಾನ ಪರಿಹಾರಕ್ಕಾಗಿ ಇನ್ನೂ ಕೂಡಾ ಕೋರ್ಟ್ ಕಚೇರಿಗಳನ್ನು ಅಲೆಯುತ್ತಿದ್ದಾರೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಪಕ್ಕದ ಕೆಂಜಾರುವಿನಲ್ಲಿ ವಿಮಾನ ದುರಂತಕ್ಕೀಡಾಗಿ, ಅದರೊಳಗಿದ್ದ 158 ಮಂದಿ ಸುಟ್ಟು ಕರಕಲಾದ ಘಟನೆಗೆ ಸಂಬಂಧಿಸಿ ಬಹುತೇಕ ಮೃತರ ಕುಟುಂಬಸ್ಥರು ನ್ಯಾಯಯುತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ.

ಎರಡು ದೇಶಗಳ ನಡುವೆ ವಿಮಾನ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒಡಂಬಡಿಕೆಯ ಪ್ರಕಾರ ತಲಾ 75 ಲಕ್ಷ ರೂ.ಗಳನ್ನು ಪರಿಹಾರವಾಗಿ ಏರ್ ಇಂಡಿಯಾ ಪಾವತಿಸಬೇಕಾಗಿದೆ. ಈ ಬಗ್ಗೆ ಮಂಗಳೂರು ವಿಮಾನ ದುರಂತ ಸಂತ್ರಸ್ತರ ಅಸೋಸಿಯೇಶನ್ ಕೇರಳ ಹೈಕೋರ್ಟ್‌ನಲ್ಲಿ ದಾವೆಯನ್ನು ಹೂಡಿತ್ತು. ಹೈಕೋರ್ಟ್‌ನ ಏಕಸದಸ್ಯ ಪೀಠ ತಕ್ಷಣ 75 ಲಕ್ಷ ರೂ. ಕನಿಷ್ಠ ಪರಿಹಾರ ನೀಡಲು ಆದೇಶ ನೀಡಿತ್ತು. ಏರ್ ಇಂಡಿಯಾ ಇದರ ವಿರುದ್ದ ಮೇಲ್ಮನವಿ ಸಲ್ಲಿಸಿತು. ಹೈಕೋರ್ಟ್‌ನ ದ್ವಿಸದಸ್ಯ ಪೀಠ ಈ ಆದೇಶವನ್ನು ರದ್ದು ಮಾಡಿ, ಮೃತರ ವೃತ್ತಿ, ಆದಾಯ, ವಯಸ್ಸು ಪರಿಗಣಿಸಿ ಪರಿಹಾರ ನೀಡುವಂತೆ ಸೂಚಿಸಿತ್ತು. ಈ ತೀರ್ಪಿ ನಿಂದ ಅಸಮಾಧಾನಗೊಂಡ ಸಂತ್ರಸ್ತರ ಅಸೋಸಿಯೇಶನ್ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿ ಸುಮಾರು ಐದು ವರ್ಷಗಳು ಕಳೆದಿವೆ. ತೀರ್ಪು ಮಾತ್ರ ಇನ್ನೂ ಹೊರಬಂದಿಲ್ಲ. ಈ ನಡುವೆ ಮೃತ ಕುಟುಂಬದ 14 ಮಂದಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ದಾವೆಯೊಂದನ್ನೂ ಹೂಡಿದ್ದಾರೆ.

ಈಡೇರದ ಸಮುದಾಯ ಭವನದ ಭರವಸೆ

ಇದೇ ವೇಳೆ ಮಹಾದುರಂತದ ಪ್ರಥಮ ವರ್ಷಾಚರಣೆಯ ವೇಳೆ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ಮುಖ್ಯ ನಿರ್ವಹಣಾಧಿಕಾರಿ ಎಸ್.ಚಂದ್ರಕುಮಾರ್, ದುರಂತ ಸಂಭವಿಸಿದ ಕೆಂಜಾರು ವ್ಯಾಪ್ತಿಯಲ್ಲಿ ಮೃತರ ಸ್ಮರಣಾರ್ಥ ಸಮುದಾಯ ಭವನ, ಗ್ರಂಥಾಲಯ ಹಾಗೂ ಆರೋಗ್ಯ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಇದರ ನಿರ್ಮಾಣದ ಶೇ.90ರಷ್ಟು ಮೊತ್ತವನ್ನು ಏರ್ ಇಂಡಿಯಾ ಹಾಗೂ ಉಳಿದ ಶೇ.10ರಷ್ಟು ಭಾಗವನ್ನು ಸ್ಥಳೀಯ ಗ್ರಾ.ಪಂ. ಭರಿಸಬೇಕು ಎಂದು ತಿಳಿಸಿದ್ದರು. ಇದಕ್ಕೆ ಸ್ಥಳೀಯ ಗ್ರಾ.ಪಂ. ಆಡಳಿತ ಮಂಡಳಿ ಒಪ್ಪಿಗೆಯನ್ನೂ ನೀಡಿತ್ತು. ಆದರೆ ಐದು ವರ್ಷಗಳು ಕಳೆದರೂ ಆ ಬಗ್ಗೆ ಯಾವುದೇ ಪ್ರಗತಿ ಆಗಿಲ್ಲ.

ಇನ್ನು ವಿಮಾನ ದುರಂತಕ್ಕೀಡಾದ ಸ್ಥಳದಲ್ಲಿ ಮೃತರ ಸ್ಮರಣಾರ್ಥ ಹಾಕಲಾಗಿದ್ದ ನಾಮಫಲಕವನ್ನು ದುರಂತ ಸಂಭವಿಸಿದ ವರ್ಷ ತುಂಬುವ ಮೊದಲೇ ನಾಶಪಡಿಸಲಾಗಿತ್ತು. ದುರಂತ ಸಂಭವಿಸಿದ ಸಂದರ್ಭ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಯ ಮಾತು ಅಂದಿನ ವಿಮಾನಯಾನ ಸಚಿವರಿಂದಲೇ ವ್ಯಕ್ತವಾಗಿತ್ತು. ಈ ಬಗ್ಗೆ ಅಗತ್ಯ ಭೂಮಿಯನ್ನು ಸ್ವಾಧೀನ ಮಾಡಿಕೊಡುವ ಪ್ರಕ್ರಿಯೆ ರಾಜ್ಯ ಸರಕಾರದಿಂದ ಆಗಬೇಕಾಗಿದೆ.

ವಿಮಾನ ದುರಂತದಲ್ಲಿ ಸಾವನ್ನಪ್ಪಿದರಿಗೆ ಸ್ಮಾರಕ ಪಾರ್ಕ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ದ.ಕ ಜಿಲ್ಲಾಧಿಕಾರಿ ಸಾಕಷ್ಟು ಶ್ರಮವಹಿಸಿದ್ದಾರೆ. ವಿಮಾನ ಅಪಘಾತದಲ್ಲಿ ಗುರುತಿಸಲು ಸಾಧ್ಯವಾಗದ ಮೃತದೇಹಗಳನ್ನು ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಈ ಕಾರ್ಯವನ್ನು ಶ್ರಮವಹಿಸಿ ಮಾಡಿದ ಜಿಲ್ಲಾಧಿಕಾರಿಗೆ ಸಂತ್ರಸ್ತ ಕುಟುಂಬದವರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

ವೈ.ಮುಹಮ್ಮದ್ ಬ್ಯಾರಿ, ಎಡಪದವು, ಅಧ್ಯಕ್ಷರು ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಂಘ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News