×
Ad

ಭೂಮಿಯ ಸನಿಹಕ್ಕೆ ಬರಲಿವೆ ಮಂಗಳ, ಶನಿ ಗ್ರಹಗಳು!

Update: 2016-05-21 19:24 IST

ಉಡುಪಿ, ಮೇ 21: ಸೌರಮಂಡಲ, ಆಕಾಶಕಾಯಗಳ ವಿಸ್ಮಯ ಈ ವಾರ ಮತ್ತೆ ಮರುಕಳಿಸಲಿದೆ. ಈ ವಾರ ಮಂಗಳ ಗ್ರಹ ಹಾಗೂ ಬರುವ ವಾರ ಶನಿಗ್ರಹ ಆಕಾಶದಲ್ಲಿ ಬಲು ಸುಂದರವಾಗಿ ಕಂಗೊಳಿಸಲಿದ್ದಾರೆ. ಈ ವಾರ ಮಂಗಳಗ್ರಹ ಭೂಮಿಗೆ ಸಮೀಪದಲ್ಲಿ ಹಾದುಹೋಗಲಿದ್ದು ದೊಡ್ಡದಾಗಿ ಕಾಣಿಸಲಿದೆ.

ಸೂರ್ಯ, ಭೂಮಿ ಹಾಗೂ ಮಂಗಳ ಗ್ರಹಗಳು ನೇರವಾಗಿದ್ದು ಭೂಮಿ ಮಧ್ಯದಲ್ಲಿ ಬರುವ ಈ ವಿದ್ಯಾಮಾನಕ್ಕೆ ಮಾರ್ಸ್‌ ಒಪೋಸಿಷನ್ (Mars Opposition) ಎನ್ನುತ್ತಾರೆ. ಎರಡು ವರ್ಷಗಳಿಗೊಮ್ಮೆ ಹೀಗಾಗುತ್ತದೆ.

ಸೂರ್ಯನ ಸುತ್ತ ಭೂಮಿ 15 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿರುತ್ತದೆ. ಮಂಗಳ ಗ್ರಹ ಸೂರ್ಯನಿಂದ ಸುಮಾರು 24 ಕೋಟಿ ಕಿ.ಮೀ.ದೂರದಲ್ಲಿ ಸುತ್ತುತ್ತಿರುತ್ತದೆ. ಹಾಗಾಗಿ ಎರಡು ವರ್ಷಗಳಿಗೊಮ್ಮೆ ಭೂಮಿ ಮತ್ತು ಮಂಗಳ ಗ್ರಹಗಳ ದೂರ ಅತೀ ಸಮೀಪವೆಂದರೆ ಸುಮಾರು 9 ಕೋಟಿ ಕಿ.ಮೀ. ಹಾಗೆಯೇ ಅತ್ಯಂತ ದೂರ ಸುಮಾರು 39 ಕೋಟಿ ಕಿ.ಮೀ. ದೂರದಲ್ಲಿರುತ್ತದೆ. ಹೀಗಾಗಿ ಇವೆರಡು ಅತೀ ಸಮೀಪ ಬಂದಾಗ ಮಂಗಳ ಗ್ರಹ ದೊಡ್ಡದಾಗಿ ಕಾಣಿಸುತ್ತದೆ. ದೂರದಲ್ಲಿದ್ದಾಗ ಚಿಕ್ಕದಾಗಿ ಕಾಣಿಸುತ್ತದೆ. ಈ ವಾರ ಮಂಗಳಗ್ರಹ ಭೂಮಿಯಿಂದ ಸುಮಾರು 7.5 ಕೋಟಿ ಕಿ.ಮೀ. ದೂರದಲ್ಲಿದ್ದು ಪೂರ್ವ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಚಂದವಾಗಿ ಹೊಳೆಯುತ್ತಿರುತ್ತದೆ.

ಅದೇ ರೀತಿ ಜೂನ್ 3ರಂದು ಶನಿಗ್ರಹದ ಓಪೋಸಿಷನ್. ಇದರಿಂದ ಸಂಜೆಯಾದೊಡನೆ ಮಂಗಳ, ಶನಿ ಗ್ರಹಗಳು ಚೆನ್ನಾಗಿ ಕಾಣಿಸಲಿವೆ.

ಮೇ 28ರಂದು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸದಸ್ಯರು ದೂರದರ್ಶಕದ ಮೂಲಕ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದು ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News