×
Ad

ಉಪ್ಪಳದಲ್ಲಿ ಘರ್ಷಣೆ: ಯುವಕನಿಗೆ ಇರಿತ; ಬೈಕ್ ಧ್ವಂಸ

Update: 2016-05-21 20:22 IST

ಮಂಜೇಶ್ವರ, ಮೇ 21: ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳದಲ್ಲಿ ಮತ್ತೆ ಘರ್ಷಣೆ ಉಂಟಾಗಿದ್ದು, ಯುವಕನೋರ್ವನಿಗೆ ಇರಿದು ಕೊಲೆಗೆ ಯತ್ನಿಸಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಘಟನೆ ಹಿನ್ನಲೆಯಲ್ಲಿ ಎರಡು ಗುಂಪುಗಳು ಸೇರಿ ಪರಸ್ಪರ ಘರ್ಷಣೆಗೆ ಮುಂದಾದಾಗ ಪೊಲೀಸರು ಮೂರು ಬಾರಿ ಲಾಠಿ ಪ್ರಹಾರ ನಡೆಸಿದ್ದಾರೆ. ಯುವಕನನ್ನು ಇರಿದ ತಂಡ ಸಂಚರಿಸಿದ ಬೈಕನ್ನು ಧ್ವಂಸ ಮಾಡಲಾಗಿದೆ.

ಉಪ್ಪಳ ಪಚ್ಚಿಲಂಪಾರೆಯ ಕಾಲನಿಯ ವಿಶ್ವಾಸ್ ಅಬ್ದುಲ್ಲ ಎಂಬವರ ಪುತ್ರ ಅಬ್ದುಲ್ ಮುನೀರ್(24) ಇರಿತಕ್ಕೊಳಗಾದ ಯುವಕ. ಬೈಕ್‌ನಲ್ಲಿ ಚೆರುಗೋಳಿಗೆ ತೆರಳಿ ಮರಳುತ್ತಿದ್ದ ಮುನೀರ್‌ನನ್ನು ಬಿಜೆಪಿ ಕಾರ್ಯಕರ್ತ ಶೈಜೇಶ್ ಎಂಬಾತ ಇರಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇರಿತದಿಂದ ಗಂಭೀರ ಗಾಯಗೊಂಡ ಮುನೀರ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದು ಉಪ್ಪಳ ತಲುಪಿದ ಗುಂಪೊಂದು ಶೈಜೇಶ್‌ನ ಬೈಕನ್ನು ದ್ವಂಸ ಮಾಡಿದೆ. ಇದರಿಂದಾಗಿ ಗುಂಪನ್ನು ಚದುರಿಸಲು ಪೊಲೀಸರು ಮೂರು ಬಾರಿ ಲಾಠಿ ಪ್ರಹಾರ ನಡೆಸಿದ್ದಾರೆ.

ಘಟನೆ ಹಿನ್ನಲೆಯಲ್ಲಿ ಉಪ್ಪಳದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ. ಇದೀಗ ಘರ್ಷಣೆ ಹತೋಟಿ ಬಂದಿದ್ದು, ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News