ಉಪ್ಪಿನಂಗಡಿ: ರೋಟರಿ ಕ್ಲಬ್‌ನ ರಜತ ಮಹೋತ್ಸವ

Update: 2016-05-21 15:52 GMT

ಉಪ್ಪಿನಂಗಡಿ, ಮೇ 21: ಸಮಾಜಮುಖಿ ಚಟುವಟಿಕೆಗಳ ಮೂಲಕ ನಾವೆಲ್ಲಾ ಒಂದೇ ಎನ್ನುವ ಸೌಹಾರ್ದಯುತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೋರ್ವ ರೋಟರಿ ಸದಸ್ಯನೂ ಕಾರ್ಯಪ್ರವೃತವಾಗಬೇಕಿದ್ದು, ಇದರೊಂದಿಗೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ನಡೆಯಬೇಕು ಎಂದು ರೋಟರಿ ಕ್ಲಬ್‌ನ ಮಾಜಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ ಶೆಟ್ಟಿ ತಿಳಿಸಿದ್ದಾರೆ.

ಇಲ್ಲಿನ ಸಿಎ ಬ್ಯಾಂಕ್‌ನ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಉಪ್ಪಿನಂಗಡಿ ರೋಟರಿ ಕ್ಲಬ್‌ನ ರಜತ ಮಹೋತ್ಸವ ಆಚರಣೆಯ ಸಂದರ್ಭ ರೋಟರಿಯ ‘ಸೇವಾ ಸಂಗಮ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಜಾತಿ, ಧರ್ಮ, ಭಾಷೆ, ದೇಶಗಳ ಎಲ್ಲೆಯನ್ನು ಮೀರಿ ಪರಸ್ಪರ ಬಾಂಧವ್ಯ ವೃದ್ಧಿಗೊಳಿಸುವುದು ರೋಟರಿಯ ಪ್ರಮುಖ ಧ್ಯೇಯವಾಗಿದ್ದು, ಇದರೊಂದಿಗೆ ಮುಂದಿನ ಸಮಾಜವನ್ನು ರೂಪಿಸುವ ಕಾರ್ಯವೂ ರೋಟರಿ ಸದಸ್ಯರಿಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ 2.45 ಲಕ್ಷ ರೂ. ವೆಚ್ಚದಲ್ಲಿ ರೋಟರಿ ವತಿಯಿಂದ ನಿರ್ಮಿಸಲಾದ ವಿಶ್ರಾಂತಿ ಕೊಠಡಿ ಹಾಗೂ ಫೀಡಿಂಗ್ ರೂಂ ಅನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಎ., ಉಪ್ಪಿನಂಗಡಿ ರೋಟರಿ ಕ್ಲಬ್‌ನ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು.

ಉಪ್ಪಿನಂಗಡಿ ರೋಟರಿ ಕ್ಲಬ್ ಸ್ಥಾಪನೆಯಾದ ಬಳಿಕ ಈವರೆಗೆ ಸಂಸ್ಥೆಯ ಅಧ್ಯಕ್ಷರಾಗಿದ್ದವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಡಾ. ಬಿ. ಶ್ಯಾಮ್ ಹಾಗೂ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌ರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದು ತೇರ್ಗಡೆಯಾದ ಸಂಸ್ಥೆಯ ಸದಸ್ಯರ ಮಕ್ಕಳನ್ನು ಈ ಸಂದರ್ಭ ಗೌರವಿಸಲಾಯಿತು.

ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ರೋಟರಿ ವಲಯ 5ರ ಉಪ ಗವರ್ನರ್ ರಾಮಕೃಷ್ಣ ಮಲ್ಲಾರ, ವಲಯ ಲೆಫ್ಟಿನೆಂಟ್ ಸಂತೋಷ್ ಕುಮಾರ್ ಶೆಟ್ಟಿ, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ನಿರಂಜನ್ ರೈ, ಪೂರ್ವಾಧ್ಯಕ್ಷ ಅಶ್ರಫ್ ಅಗ್ನಾಡಿ, ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ದ.ಕ. ಜಿಲ್ಲಾ ಕಾರ್ಯದರ್ಶಿ ಸಂಜೀವ ಮಠಂದೂರು, ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಕೃಷ್ಣ, ಗ್ರಾಮ ಪಂಚಾಯತ್ ಸದಸ್ಯ ಯು.ಟಿ. ತೌಸೀಫ್, ವನಿತಾ ಸಮಾಜದ ಉಷಾ ಚಂದ್ರ ಮುಳಿಯ, ರೋಟರಿ ಕ್ಲಬ್‌ನ ಜಾರ್ಜ್ ನೊರೋನ್ನಾ, ಗುಣಕರ ಅಗ್ನಾಡಿ, ಸುಧಾಕರ ಶೆಟ್ಟಿ, ಅಬೂಬಕ್ಕರ್ ಪುತ್ತು, ಪುಷ್ಪರಾಜ್ ಶೆಟ್ಟಿ, ರಾಮಕೃಷ್ಣ, ಅಬ್ರಾಹಂ ವರ್ಗೀಸ್, ಬಾಲಕೃಷ್ಣ ಭಟ್, ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

ರಜತ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಅಝೀಝ್ ಬಸ್ತಿಕಾರ್ ಸ್ವಾಗತಿಸಿದರು. ರೋಟರಿಯನ್‌ಗಳಾದ ಅಬ್ದುರ್ರಹ್ಮಾನ್ ಯುನಿಕ್, ರವೀಂದ್ರ ದರ್ಬೆ, ಇಸ್ಮಾಯೀಲ್ ಇಕ್ಬಾಲ್ ಪಾಂಡೇಲ್, ಅಬ್ದುಸ್ಸಮದ್, ವಿಜಯಕುಮಾರ್ ಕಲ್ಲಳಿಕೆ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ರೋಟರಿ ಕ್ಲಬ್‌ನ ಕಾರ್ಯದರ್ಶಿ ಮನೋಹರ್ ಕುಮಾರ್ ವಂದಿಸಿದರು. ಸದಸ್ಯರಾದ ದಿವಾಕರ ಆಚಾರ್ಯ ಹಾಗೂ ಮಿತ್ರಸೇನ ಜೈನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News