ಬಂಟ್ವಾಳ: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ

Update: 2016-05-21 16:01 GMT

ಬಂಟ್ವಾಳ, ಮೇ 21: ತಾಲೂಕಿನಾದ್ಯಂತ ಮೇ 17ರಂದು ಬೀಸಿದ ಭಾರೀ ಬಿರುಗಾಳಿಗೆ ಮನೆಗಳು ಹಾನಿಗೊಂಡ ಸಂತ್ರಸ್ತರಿಗೆ ಪ್ರಕೃತಿ ವಿಕೋಪದಡಿ ಬಿಡುಗಡೆಗೊಂಡ ಪರಿಹಾರದ ಚೆಕ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ ಬಿ.ಸಿ.ರೋಡಿನ ತಮ್ಮ ಕಚೇರಿ ಸಭಾಂಗಣದಲ್ಲಿ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಬಿರುಗಾಳಿಗೆ ತುತ್ತಾಗಿ ಬಂಟ್ವಾಳ ತಾಲೂಕಿನಾದ್ಯಂತ ನೂರಾರು ಮನೆಗಳು ಹಾನಿಗೊಳಗಾಗಿವೆ. ಆ ದಿನ ನಾನು ಊರಲ್ಲಿರದೆ ಬೆಂಗಳೂರಿನಲ್ಲಿದ್ದೆ. ಮರು ದಿನ ಬೆಳಗ್ಗೆಯೇ ಬೆಂಗಳೂರಿನಿಂದ ಬಂದು ಗಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇದೀಗ ಪರಿಹಾರ ಕಾರ್ಯ ಬಹುತೇಕ ಮುಗಿದಿದ್ದು ಬಾಕಿ ಇರುವಲ್ಲಿ ಒಂದೆರಡು ದಿನದಲ್ಲಿ ಮುಗಿಸಲಾಗುವುದು ಎಂದು ಹೇಳಿದರು.

ಭಾಗಶಃ ಹಾನಿಗೊಂಡ ಮನೆಯ ಸಂತ್ರಸ್ತರಿಗೆ ತಲಾ 5,200 ರಂತೆ ಒಟ್ಟು 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮನೆ ಮತ್ತು ಕೃಷಿ ಹಾನಿಗೊಂಡ ಸಂತ್ರಸ್ತರ ಸರ್ವೇ ಕಾರ್ಯ ನಡೆಯುತ್ತಿದ್ದು ಅವರಿಗೆ ಶೀಘ್ರದಲ್ಲೇ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದ ಅವರು, ಸರ್ವೇ ಕಾರ್ಯವನ್ನು ಶೀಘ್ರಗತಿಯಲ್ಲಿ ಮುಗಿಸಲು ಹೆಚ್ಚುವರಿ ಗ್ರಾಮ ಕರಣಿಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಬುಡ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪಸಾಲ್ಯಾನ್, ತಹಶೀಲ್ದಾರ್ ಪುರಂದರ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News