ಕಾವೂರು ಎಸ್‌ಐನಿಂದ ಮಹಿಳೆಗೆ ದೌರ್ಜನ್ಯ: ಆರೋಪ

Update: 2016-05-21 16:15 GMT

ಮಂಗಳೂರು, ಮೇ 21: ಪ್ರಕರಣವೊಂದರ ಆರೋಪಿಯನ್ನು ವಶಕ್ಕೆ ಪಡೆಯಲು ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಕಾವೂರು ಪೊಲೀಸ್ ಠಾಣಾ ಎಸ್ಸೈ ಉಮೇಶ್, ತಡೆಯಲು ಬಂದ ಮಹಿಳೆಯನ್ನು ದೂಡಿಹಾಕಿ ದೌರ್ಜನ್ಯ ಎಸಗಿದ ಬಗ್ಗೆ ಆರೋಪಿಸಲಾಗಿದೆ. ಎಸ್ಸೈ ದೌರ್ಜನ್ಯದಿಂದ ನೆಲಕ್ಕೆ ಬಿದ್ದು ಗಾಯಗೊಂಡ ಮಹಿಳೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳು ಮಹಿಳೆಯನ್ನು ಕಾವೂರು ಶಾಂತಿನಗರದ ನಿವಾಸಿ ಮುಹಮ್ಮದ್ ಇಕ್ಬಾಲ್ ಎಂಬವರ ಪತ್ನಿ ಫಾತಿಮಾ ರೊಹರಾ (25) ಎಂದು ಗುರುತಿಸಲಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿ ಶುಕ್ರವಾರ ರಾತ್ರಿ ಸುಮಾರು 8:30ಕ್ಕೆ ಕಾವೂರು ಠಾಣಾ ಎಸ್ಸೈ ಉಮೇಶ್ ಮನೆಗೆ ಬಂದು ತನ್ನ ಪತಿ ಇಕ್ಬಾಲ್‌ರನ್ನು ಕೂಡಲೇ ಠಾಣೆಗೆ ಬರುವಂತೆ ಸೂಚಿಸಿದರಲ್ಲದೆ, ಸಹಿ ಪಡೆದು ಬಿಡುವುದಾಗಿ ತಿಳಿಸಿದ್ದರು. ಆದರೆ, ಮನೆಯಲ್ಲಿ ಕಾರ್ಯಕ್ರಮವೊಂದು ಇರುವುದರಿಂದ ನಾಳೆ ಕಳುಹಿಸಿಕೊಡುವುದಾಗಿ ನಾನು ಅವರಲ್ಲಿ ವಿನಂತಿಸಿದ್ದೆ. ಆದರೆ ಅವರು ನನ್ನ ಮನೆಯೊಳಗೆ ಪ್ರವೇಶಿಸಿ ನನ್ನ ಪತಿಯನ್ನು ಎಳೆದೊಯ್ದಿದ್ದಾರೆ. ತಡೆಯಲು ಬಂದ ನನ್ನನ್ನು ದೂಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಫಾತಿಮಾ ರೊಹರಾ ಆರೋಪ ಮಾಡಿದ್ದಾರೆ.

ಎಸ್ಸೈ ದೌರ್ಜನ್ಯದಿಂದ ನೆಲಕ್ಕೆ ಬಿದ್ದ ಫಾತಿಮಾ ಅವರಿಗೆ ಶಸ್ತ್ರಚಿಕಿತ್ಸೆಗೊಳಗಾದ ಹೊಟ್ಟೆಯ ಭಾಗಕ್ಕೆ ಬಲವಾದ ಏಟು ತಗಲಿದ್ದು, ಕೈಗಳಿಗೂ ಪೆಟ್ಟು ಬಿದ್ದಿದೆ. ಈ ಬಗ್ಗೆ ಫಾತಿಮಾ ಅವರು ಎಸ್ಸೈ ಉಮೇಶ್ ಅವರನ್ನುದ್ದೇಶಿಸಿ ‘‘ಮಹಿಳೆಯೊಂದಿಗೆ ನೀವು ವರ್ತಿಸಿದ ರೀತಿಯ ಬಗ್ಗೆ ನಾನು ದೂರು ನೀಡುತ್ತೇನೆ’’ ಎಂದಾಗ ‘‘ದೂರು ನೀಡಿದರೆ ನಿನ್ನ ಗಂಡನನ್ನು ಎನ್‌ಕೌಂಟರ್ ಮಾಡಿ ಬಿಸಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಯಾವ ಪ್ರಕರಣದಲ್ಲೂ ಇಲ್ಲದ ತನ್ನ ಗಂಡನನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಫಾತಿಮಾ ರೊಹರಾ ದೂರಿದ್ದಾರೆ.

ಇಕ್ಬಾಲ್ ಮೇಲಿನ ಆರೋಪವೇನು?

ವ್ಯಕ್ತಿಯೊಬ್ಬರ ಕೊಲೆಗೆ ನಾಲ್ಕು ಮಂದಿ ಸಂಚು ರೂಪಿಸಿದ್ದಾರೆ ಎಂಬುದು ಪೊಲೀಸರ ಆರೋಪವಾಗಿತ್ತು. ಅವರ ಪ್ರಕಾರ ಪ್ರಕರಣದಲ್ಲಿ ಇಕ್ಬಾಲ್ ಕೂಡ ಓರ್ವ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂರು ತಿಂಗಳ ಹಿಂದೆ ಇಬ್ಬರನ್ನು ಬಂಧಿಸಿದ್ದರು. ಈ ಸಂಬಂಧ ಪೊಲೀಸರು ಎರಡು ತಿಂಗಳ ಹಿಂದೆಯೇ ಇಕ್ಬಾಲ್ ಮನೆಗೆ ಬಂದು ಹುಡುಕಾಟ ನಡೆಸಿದ್ದರು. ಇದನ್ನರಿತ ಇಕ್ಬಾಲ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡಿದ್ದ.

ಎಪ್ರಿಲ್ 19ರಂದು ಜಾಮೀನಿನ ಪ್ರತಿ ಹಿಡಿದುಕೊಂಡು ಕಾವೂರು ಪೊಲೀಸ್ ಠಾಣೆಗೆ ತೆರಳಿದ್ದ ಇಕ್ಬಾಲ್‌ನನ್ನು ಪೊಲೀಸರು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಠಾಣೆಯಲ್ಲಿ ಕೂಡಿಹಾಕಿದ್ದರು. ಇದಾದ ಬಳಿಕ ಸಂಜೆ ಆರು ಗಂಟೆಗೆ ನನ್ನನ್ನು ಮಂಗಳೂರಿನ ಸಿಸಿಬಿ ಪೊಲೀಸರ ಬಳಿಗೆ ಕರೆದುಕೊಂಡು ಹೋಗಿದ್ದು, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದೇನೆಂದು ಹೇಳಿದ್ದರೂ ಅರೆನಗ್ನವಾಗಿ ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಹಲ್ಲೆಗೊಳಗಾಗಿದ್ದ ಇಕ್ಬಾಲ್ ಅಂದು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು.

ಸಿಸಿಬಿ ಇನ್‌ಸ್ಪೆೆಕ್ಟರ್ ವೆಲೆಂಟೈನ್ ಡಿಸೋಜ, ಸಿಬ್ಬಂದಿಯಾದ ಸುನಿಲ್, ಇಸಾಕ್, ಚಂದ್ರಹಾಸ ಹಾಗೂ ಇತರ 5 ಮಂದಿ ಸಿಸಿಬಿ ಪೊಲೀಸರು ತನ್ನ ಕಾಲಿನ ಮೇಲೆ ನಿಂತು ಕಾಲಿನ ಅಡಿ ಭಾಗ, ಮಂಡಿ, ಕಾಲಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ, ನನ್ನ ಕೈಗಳ ಸಹಿತ ಗುಪ್ತಾಂಗದ ಭಾಗಗಳಿಗೂ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದ ಇಕ್ಬಾಲ್, ಈ ಸಂಬಂಧ ವೆಲೆಂಟೈನ್ ಡಿಸೋಜ ಮತ್ತು ಸಿಬ್ಬಂದಿ ವಿರುದ್ಧ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದರು.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಇಕ್ಬಾಲ್ ದೂರು ನೀಡಿದ್ದರಿಂದ ಇದೇ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಮನೆಗೆ ನುಗ್ಗಿ ಇಕ್ಬಾಲ್‌ರನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಗೂಂಡಾ ಕಾಯ್ದೆಯಡಿ ಬಂಧನ

ಮಂಗಳೂರು, ಮೇ 21: ಕಾವೂರು ಶಾಂತಿನಗರದ ನಿವಾಸಿ ಮುಹಮ್ಮದ್ ಇಕ್ಬಾಲ್ (37) ಎಂಬಾತನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಮುಹಮ್ಮದ್ ಇಕ್ಬಾಲ್ ವಿರುದ್ಧ 2009ರಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಬಜ್ಪೆ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಇವುಗಳಲ್ಲಿ ಕೊಲೆ, ಸುಲಿಗೆ, ಸೊತ್ತು ಹಾನಿ ಮತ್ತು ದರೋಡೆಗೆ ಯತ್ನ ಪ್ರಕರಣಗಳು ಸೇರಿದ್ದು, ಬಂಧಿತ ಇಕ್ಬಾಲ್‌ನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಬ್ಲಾಗ್ ತಿಳಿಸಿದೆ.

ಪೊಲೀಸ್ ನಿರೀಕ್ಷಕರು, ಸಂಬಂಧಪಟ್ಟ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರ ವರದಿಯ ಆಧಾರದ ಮೇರೆಗೆ ನಗರ ಪೊಲೀಸ್ ಆಯುಕ್ತರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News