ಮಾರ್ಟಿನಿಕ್: ಝಿಕಾ ವೈರಸ್‌ಗೆ ಮೊದಲ ಬಲಿ

Update: 2016-05-21 16:42 GMT

ಫೋರ್ಟ್ ದ ಫ್ರಾನ್ಸ್,ಮೇ 21: ಕೆರಿಬಿಯನ್ ಸಮುದ್ರದ ಫ್ರೆಂಚ್ ದ್ವೀಪ ಮಾರ್ಟಿನಿಕ್‌ನಲ್ಲಿ ಝಿಕಾ ವೈರಸ್ ಸೋಂಕಿನಿಂದಾಗಿ ಪ್ರಪ್ರಥಮ ಬಾರಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ, ಪ್ರಾದೇಶಿಕ ಆರೋಗ್ಯ ಏಜೆನ್ಸಿ ಶನಿವಾರ ತಿಳಿಸಿದೆ. ‘‘ 84 ವರ್ಷ ವಯಸ್ಸಿನ ಈ ರೋಗಿಯು, ಹತ್ತು ದಿನಗಳಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಗಿಲಾಯಿನ್ ಬರ್ರೆ ಸಿಂಡ್ರೋಮ್ (ಜಿಬಿಎಸ್) ಎಂಬ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು’’ ಎಂದು ಅದು ಹೇಳಿದೆ. ಕಳೆದ ವಾರವಷ್ಟೇ ಆ ವೃದ್ಧರಿಗೆ ಜಿಕಾ ವೈರಸ್ ಸೋಂಕು ತಗಲಿರುವುದು ಬೆಳಕಿಗೆ ಬಂದಿತ್ತೆಂದು ಏಜೆನ್ಸಿಯ ಹೇಳಿಕೆ ತಿಳಿಸಿದೆ.ನರವ್ಯೆಹದ ರೋಗನಿರೋಧಕ ಶಕ್ತಿಗೆ ಹಾನಿಯುಂಟು ಮಾಡುವ ಜಿಬಿಎಸ್ ಕಾಯಿಲೆಗೂ, ಝಿಕಾ ವೈರಸ್‌ಗೂ ಪರಸ್ಪರ ಸಂಬಂಧವಿರುವುದಾಗಿ ತಜ್ಞರು ಅಭಿಪ್ರಾಯಿಸಿದ್ದಾರೆ.

   ಮಾರ್ಟಿನಿಕ್‌ನಲ್ಲಿ ವರದಿಯಾದ ಪ್ರಥಮ ಝಿಕಾ ವೈರಸ್‌ನಿಂದಾಗಿ ಸಂಭವಿಸಿದ ಸಾವು ಇದಾಗಿದೆಯೆಂದು ಏಜೆನ್ಸಿ ತಿಳಿಸಿದೆ. ಈ ಸಾವು ಸಂಭವಿಸುವ ಮುನ್ನ ಫ್ರೆಂಚ್ ಕೆರಿಬಿಯನ್ ಸಾಗರೋತ್ತರ ಇಲಾಖೆಯು, 19 ಮಂದಿ ರೋಗಿಗಳು ಜಿಬಿಎಸ್‌ಕಾಯಿಲೆಯಿಂದ ಬಾಧಿತರಾಗಿರುವುದಾಗಿ ತಿಳಿಸಿತ್ತು. ಏತನ್ಮಧ್ಯೆ ಮಾರ್ಟಿನಿಕ್ ದ್ವೀಪದ ನೆರೆಯ ರಾಷ್ಟ್ರವಾದ ಫ್ರೆಂಚ್ ಗಯಾನದಲ್ಲಿಯೂ ಜಿಬಿಎಸ್ ರೋಗ ಕಾಣಿಸಿಕೊಂಡಿರುವ ಬಗ್ಗೆ ವರದಿಗಳು ಬಂದಿವೆ.ಈ ವರ್ಷದ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ ವರದಿ ಪ್ರಕಾರ 40ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಝಿಕಾ ವೈರಸ್ ಸೋಂಕು ಹರಡಿದೆ.
  ಝಿಕಾ ವೈರಸ್ ಸೋಂಕು ತಗಲಿದ ಗರ್ಭಿಣಿಯರಿಗೆ, ಅಸಹಜವಾಗಿ ಸಣ್ಣ ಗಾತ್ರದ ತಲೆ ಹಾಗೂ ಮೆದುಳಿರುವ ಶಿಶುಗಳು ಜನಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News