ಉಡುಪಿ: ರಾಜ್ಯಮಟ್ಟದ ಯುವಜನ ಮೇಳ ಉದ್ಘಾಟನೆ
ಉಡುಪಿ, ಮೇ 21: ಉಡುಪಿ ಜಿಲ್ಲಾ ಪಂಚಾಯತ್ ಯುವ ಸಬ ಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ಯುವಜನ ಮೇಳ 2015-16 ಇದರ ಉದ್ಘಾಟನೆಯನ್ನು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಶನಿವಾರ ಉಡುಪಿ ಪುರಭವನದಲ್ಲಿ ನೆರವೇರಿಸಿದರು.
ಯುವಶಕ್ತಿಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಯುವಜನತೆಯನ್ನು ಸರಿ ಯಾದ ದಾರಿಯಲ್ಲಿ ಬಳಕೆ ಮಾಡುವ ದೇಶ ಉನ್ನತಿ ಸಾಧಿಸಿದರೆ, ದುರ್ಬಳಕೆ ಮಾಡುವ ದೇಶ ಅಧೋಗತಿ ಸಾಗುತ್ತದೆ. ಯುವಜನತೆಯಲ್ಲಿ ದೇಶಾಭಿ ಮಾನ ಬೆಳೆಸುವ ಕಾರ್ಯ ಇಂದಿನ ಅಗತ್ಯವಾಗಿದೆ. ಮುಂದಿನ ಭವಿಷ್ಯ ಕಟ್ಟುವ ಕೆಲಸ ಯುವಕರಿಂದ ಆಗಬೇಕು ಎಂದು ಸೊರಕೆ ಹೇಳಿದರು.
ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯ ಚಂದ್ರ ಜೈನ್ ಮಾತನಾಡಿ, ಭಾರತದಲ್ಲಿ ಶಿಸ್ತಿನ ಕೊರತೆ ಇದೆ. ಯುವಜನತೆಯಲ್ಲಿ ಶಿಸ್ತು ಇರಬೇಕಾದುದು ಅಗತ್ಯವಾಗಿದೆ. ಶಿಸ್ತನ್ನು ಅನುಸರಿಸುವುದರಿಂದ ಯೋಗ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2014-15ನೆ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ಲೋಕೇಶ್ ಡಿ. ತುಮಕೂರು, ಸಿದ್ಧಪ್ಪ ಬಸಪ್ಪ ದುರ ದುಂಡಿ ಬೆಳಗಾವಿ, ಶಿಲ್ಪಾ ರಾಯಚೂರು, ಸುನೀಲ ಭಾವಿಕಟ್ಟಿ ಬೀದರ್, ಅಂದಪ್ಪ ಗಿಡಪ್ಪ ಹಾರೊಗೇರಿ ಗದಗ, ಮುಹಮ್ಮದ್ ಹಸನ್ ಎನ್.ಶೇಖ್ ಉತ್ತರ ಕನ್ನಡ, ಲಿಂಗರಾಜ ನಿಡುವಣಿ ಧಾರವಾಡ, ಎನ್.ಅನಿಲ್ ಕುಮಾರ್ ಮಂಡ್ಯ, ಪ್ರತಿಮಾ ತುಮಕೂರು, ಎಸ್.ಡಿ.ಓಂಕಾರ್ ಜೈನ್ ಮೈಸೂರು, ಹಾವೇರಿಯ ಜೈಹಿಂದ್ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವಕ ಸಂಘ ಮತ್ತು ಉಡುಪಿಯ ಅಭಿನಯ ಜಾನಪದ ಕಲಾ ಸಂಘಕ್ಕೆ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕ್ರೀಡಾ ಇಲಾಖೆಯ ನಿರ್ದೇಶಕ ಶಿವಪ್ರಸಾದ್ ಕೆ., ಗಣನಾಥ ಎಕ್ಕಾರು, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಬಾಲಾಜಿ, ಜಿಲ್ಲಾಧ್ಯಕ್ಷ ಮನೋಹರ್ ಕುಂದರ್ ಉಪಸ್ಥಿತರಿದ್ದರು.
ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕುಂದಾಪುರ ತಾಲೂಕು ಸಹಾಯಕ ಅಧಿಕಾರಿ ದಿನಕರ ಹೆಗ್ಡೆ ವಂದಿಸಿದರು. ಕುದಿ ವಸಂತ ಶೆಟ್ಟಿ ವಂದಿಸಿದರು.