ಅತ್ತೂರು ಚರ್ಚ್‌ಗೆ ‘ಮೈನರ್ ಬಸಿಲಿಕ’ದ ಪ್ರತಿಷ್ಠೆಯ ಗರಿ
ಉಡುಪಿ, ಮೇ 21: ಕಾರ್ಕಳದ ಅತ್ತೂರು ಸಂತ ಲಾರೆನ್ಸರಿಗೆ ಸಮರ್ಪಿತ ದೇವಾಲಯವನ್ನು ಪೋಪ್ ಫ್ರಾನ್ಸಿಸ್ ಕಿರು ಮಹಾ ದೇವಾಲಯ (ಮೈನರ್ ಬಸಿಲಿಕ)ದ ಮಟ್ಟಕ್ಕೆ ಏರಿಸುವ ಘೋಷಣೆಯನ್ನು ಹೊರಡಿಸಿದ್ದು, ಈ ಮೂಲಕ ಸಂತ ಲಾರೆನ್ಸರ ದೇವಾಲಯವು ಬೆಂಗಳೂರು ಶಿವಾಜಿನಗರದ ಸೈಂಟ್ ಮೇರಿ ಮೈನರ್ ಬಸಿಲಿಕದ ನಂತರ ಕರ್ನಾಟಕದ ಎರಡನೆ ಮೈನರ್ ಬಸಿಲಿಕವಾಗಿ ಸ್ಥಾಪಿತಗೊಂಡು ಚರ್ಚ್ ಆಗಿದೆ.
ಮಹಾ ದೇವಾಲಯ(ಬಸಿಲಿಕ)ಗಳಲ್ಲಿ ಹಿರಿ ಮಹಾದೇವಾಲಯಗಳು ಹಾಗೂ ಕಿರು ಮಹಾದೇವಾಲಯಗಳು ಎರಡು ವಿಧಗಳಿವೆ. ವಿಶ್ವದ ನಾಲ್ಕೂ ಹಿರಿ ಮಹಾ ದೇವಾಲಯಗಳು ರೋಮ್ ನಗರದಲ್ಲಿವೆ. ಅವು ಸೈಂಟ್ ಜಾನ್ ಲಾತೆರಾನ್, ಸೈಂಟ್ ಪೀಟರ್, ಸೈಂಟ್ ಪಾಲ್ ಹಾಗೂ ಸೈಂಟ್ ಮೇರಿ ಮೇಜರ್. ವಿಶ್ವದಲ್ಲಿರುವ ಕಿರು ಮಹಾ ದೇವಾಲಯ(ಮೈನರ್ ಬಸಿಲಿಕ)ಗಳಲ್ಲಿ 21 ಭಾರತದಲ್ಲಿವೆ.
1973ರಲ್ಲಿ ಸ್ಥಾಪಿತಗೊಂಡ ಬೆಂಗಳೂರು ಶಿವಾಜಿನಗರದ ಸೈಂಟ್ ಮೇರಿ ಬಸಿಲಿಕವೂ ಇವುಗಳಲ್ಲೊಂದು. ಗೋವಾದ ಬೊಮ್ ಜೀಸಸ್, ಮುಂಬೈ ವೌಂಟ್ ಮೇರಿ, ತಮಿಳುನಾಡಿನ ವೆಲ್ಲಂಕಣ್ಣಿ ಮಾತೆ ಹಾಗೂ ತಂಜಾ ವೂರಿನ ಪೂಂಡಿ ಮೈನರ್ ಬಸಿಲಿಕಗಳು ಬಹು ಖ್ಯಾತಿಯನ್ನು ಪಡೆದಿವೆ.
ಕ್ರೈಸ್ತ ಧರ್ಮದಲ್ಲಿ ಮೈನರ್ ಬಸಿಲಿಕಗಳಿಗೆ ತಮ್ಮದೇ ಆದ ವಿಶೇಷ ಘನತೆ, ಗಾಂಭೀರ್ಯ ಹಾಗೂ ಉನ್ನತ ಸ್ಥಾನವಿದೆ. ಉಡುಪಿ ಧರ್ಮಪ್ರಾಂತ್ಯದ ದೇವಾಲಯಗಳಲ್ಲಿ ಸಂತ ಲಾರೆನ್ಸರ ಕಿರು ಮಹಾದೇವಾಲಯವು ಪ್ರಥಮ ಆದ್ಯತೆಯನ್ನು ಪಡೆಯುತ್ತಿದೆ ಇಲ್ಲಿನ ದೈವಾರಾಧನಾ ವಿಧಿ, ಪೂಜೆ, ಪ್ರಾರ್ಥನೆ ಗಳಿಗೆ ತನ್ನದೇ ಆದ ವೈಶಿಷ್ಟ್ಯವಿದೆ.
ಪೋಪ್ ಫ್ರಾನ್ಸಿಸರು ಸಂತ ಲಾರೆನ್ಸರ ದೇವಾಲಯವನ್ನು ಮೈನರ್ ಬಸಿಲಿಕದ ಮಟ್ಟಕ್ಕೆ ಏರಿಸಿದ ಆದೇಶದ ಮೇರೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷ ಅ.ವಂ.ಜೆರಾಲ್ಡ್ ಐಸಾಕ್ ಲೋಬೋ ಸಂತ ಲಾರೆನ್ಸರ ದೇವಾಲಯ ಸಮರ್ಪಣಾ ಸಮಾರಂಭವನ್ನು ನಡೆಸಲು ನಿರ್ಧರಿಸಿದ್ದಾರೆ. ಆ ನಂತರ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ದೇವಾಲಯಕ್ಕೆ ಸಂತ ಲಾರೆನ್ಸರ ಮೈನರ್ ಬಸಿಲಿಕ ಎಂದು ಕರೆಯಲಾಗುತ್ತದೆ.