ಹರೀಶ್ ರಾವತ್‌ರಿಂದ ಗಾಯಾಳು ತರುಣ್ ವಿಜಯ್ ಭೇಟಿ
ಡೆಹ್ರಾಡೂನ್, ಮೇ 21: ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಶನಿವಾರ ಗಾಯಾಳು ಸಂಸದ ತರುಣ್ ವಿಜಯ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಶುಕ್ರವಾರ ಚಕ್ರತಾದಲ್ಲಿ ದೇವಾಲಯವೊಂದಕ್ಕೆ ಭೇಟಿ ನೀಡಿದ ಅವರ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ದಲಿತ ಮುಖಂಡರೊಬ್ಬರ ಜತೆ ಆಸ್ಪತ್ರೆಗೆ ಆಗಮಿಸಿದ ರಾವತ್, ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ದೇವರು ಎಲ್ಲರಿಗೂ ಸೇರಿದವರು. ಆದ್ದರಿಂದ ಯಾರು ಕೂಡಾ ದೇವಸ್ಥಾನಕ್ಕೆ ಹೋಗುವುದನ್ನು ತಡೆಯಲಾಗದು ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಹಾಗೂ ಹಿರಿಯ ಎಸ್ಪಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಯುಕ್ತರು ಈ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸಲಿದ್ದು, ಇದಕ್ಕೆ ಅನುಗುಣವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರ ಹಕ್ಕನ್ನು ಎಲ್ಲರೂ ಗೌರವಿಸಬೇಕು. ದೇವಸ್ಥಾನಗಳಿಗೆ ಹೋಗಲು ಎಲ್ಲರಿಗೂ ಹಕ್ಕು ಇದೆ ಎಂದು ರಾವತ್ ವಿಜಯ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಜತೆ ಮಾತನಾಡಿದ ವೇಳೆ ಹೇಳಿದರು.