×
Ad

ಬಿಸಿಸಿಐ ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಅವಿರೋಧ ಆಯ್ಕೆ

Update: 2016-05-22 10:33 IST

 ಮುಂಬೈ, ಮೇ 22: ಶಶಾಂಕ್ ಮನೋಹರ್ ರಾಜೀನಾಮೆಯಿಂದ ತೆರವಾಗಿದ್ದ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಅನುರಾಗ್ ಠಾಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರವಿವಾರ ಇಲ್ಲಿ ನಡೆದ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯಲ್ಲಿ(ಎಸ್‌ಜಿಎಂ) ಠಾಕೂರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮನೋಹರ್ ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ ಬಳಿಕ ಐಸಿಸಿಯ ಸ್ವತಂತ್ರ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

  ಬಿಸಿಸಿಐ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಹಾಗೂ ಲೋಕಸಭೆಯಲ್ಲಿ ಬಿಜೆಪಿ ಸಂಸದರಾಗಿರುವ ಠಾಕೂರ್‌ಗೆ ಪೂರ್ವವಲಯದ ಸದಸ್ಯ ರಾಜ್ಯಗಳಾದ ಬಂಗಾಳ, ಅಸ್ಸಾಂ, ಜಾರ್ಖಂಡ್, ತ್ರಿಪುರಾ ಹಾಗೂ ನ್ಯಾಶನಲ್ ಕ್ರಿಕೆಟ್ ಕ್ಲಬ್ ಸಂಪೂರ್ಣ ಬೆಂಬಲವ್ಯಕ್ತಪಡಿಸಿದ್ದವು.

 41ರ ಹರೆಯದ ಠಾಕೂರ್ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಆಯ್ಕೆಯಾಗಿರುವ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ. ಶನಿವಾರ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಠಾಕೂರ್ ಭಾರತದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗುಲಿ ಉಪಸ್ಥಿತಿಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಜಸ್ಟಿಸ್ ಆರ್‌ಎಂ ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಲು ಸುಪ್ರೀಂಕೋರ್ಟ್‌ನಿಂದ ಒತ್ತಡವನ್ನು ಎದುರಿಸುತ್ತಿರುವ ಬಿಸಿಸಿಐಗೆ 41ರ ಹರೆಯದ ಠಾಕೂರ್ ಸಾರಥ್ಯವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News