ಕಡತ ಹಸ್ತಾಂತರಿಸದ ಅಧಿಕಾರಿ :ಕ್ರಿಮಿನಲ್ ಮೊಕದ್ದಮೆ ಸೂಚನೆ
ಪುತ್ತೂರು,ಮೇ 22: ಪುತ್ತೂರು ನಗರಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಕೆ. ವಿಜಯ ಅವರು ಪೌರಾಯುಕ್ತರ ಮೌಖಿಕ ಮತ್ತು ಲಿಖಿತ ಸೂಚನೆಯ ನಂತರವೂ ತನ್ನಲ್ಲಿದ್ದ ಕಡತಗಳನ್ನು ನಗರಸಭೆಗೆ ಹಸ್ತಾಂತರ ಮಾಡದೇ ಉಳಿಸಿಕೊಂಡಿರುವ ಕಾರಣ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಅವರು ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ.
ಕಂದಾಯ ವಿಭಾಗದಲ್ಲಿ ತೆರಿಗೆ ವಸೂಲಿಗಾರರಾಗಿ ನೇಮಕಗೊಂಡು ಬಳಿಕ ಕಂದಾಯ ನಿರೀಕ್ಷಕರಾಗಿ ಭಡ್ತಿಗೊಂಡಿದ್ದ ವಿಜಯ ಅವರು ಎಪ್ರಿಲ್ 30, 2016 ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಈ ಸಂದರ್ಭ ತನ್ನ ವಶದಲ್ಲಿದ್ದ ಖಾತಾ ಬದಲಾವಣೆ ಕುರಿತಾದ ಅರ್ಜಿ ಮತ್ತಿತರ ಕಡತಗಳನ್ನು ಹಸ್ತಾಂತರ ಮಾಡಿಲ್ಲ ಎಂದು ದೂರಲಾಗಿದೆ.
ಮೇ 11ರ ಒಳಗೆ ಇದನ್ನು ಹಸ್ತಾಂತರಿಸಬೇಕು. ತಪ್ಪಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಪೌರಾಯುಕ್ತರಿಗೆ ಮೇ 10ರಂದು ಅಧಿಕೃತ ಸೂಚನೆ ನೀಡಲಾಗಿತ್ತು. ಇದಾದ ಬಳಿಕ ವಿಜಯ ಅವರು ಕೆಲವೊಂದು ಕಡತಗಳನ್ನು ಮಾತ್ರ ಅಭಿಯಂತರ ತುಳಸಿದಾಸ್ ಅವರಿಗೆ ನೀಡಿದ್ದು, ಉಳಿದಿದ್ದನ್ನೂ ಇನ್ನೂ ನೀಡಿಲ್ಲ. ತಾನು ಕರ್ತವ್ಯಕ್ಕೆ ಸೇರಿದಂದಿನಿಂದ ನಿವೃತ್ತಿಯಾಗುವವರೆಗಿನ ಕಡತಗಳು ಅವರಲ್ಲಿದ್ದು, ಅದು ಎಲ್ಲಿವೆ ಎಂಬ ಮಾಹಿತಿಯನ್ನೂ ನೀಡಿಲ್ಲ ಎಂದು ದೂರಲಾಗಿದೆ.
ಕಡತಗಳನ್ನು ಒಪ್ಪಿಸುವಂತೆ ಮೌಖಿಕವಾಗಿ ಮತ್ತು ಲಿಖಿತವಾಗಿ ನೀಡಿದ ಸೂಚನೆಯನ್ನು ಕೂಡ ಅವರು ಪಾಲಿಸಿಲ್ಲ ಈ ಮೂಲಕ ಗಂಭೀರ ಕರ್ತವ್ಯ ಲೋಪ ಮಾಡಿರುವ ವಿಜಯ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕಡತಗಳನ್ನು ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರು ಪೌರಾಯುಕ್ತರಾದ ರೇಖಾ ಜೆ. ಶೆಟ್ಟಿ ಅವರಿಗೆ ಲಿಖಿತ ಸೂಚನೆ ನೀಡಿದ್ದಾರೆ.