ಗಂಡಿಬಾಗಿಲು ಶಾಲೆಯಲ್ಲಿ ಜನಪ್ರತಿನಿಧಿಗಳು, ಪೋಷಕರ ವಿಶೇಷ ಸಭೆ
ಪುತ್ತೂರು,ಮೇ. 22: ಕೊಯ್ಲ ಗ್ರಾಮದ ಗಂಡಿಬಾಗಿಲು ಶಾಲೆಯಲ್ಲಿ ಪ್ರಸಕ್ತ ಇರುವ ಖಾಲಿ ಹುದ್ದೆಯನ್ನು ಭರ್ತಿ ಮಾಡದೇ ಇದ್ದಲ್ಲಿ ಶಾಲಾ ಪ್ರಾರಂಭೋತ್ಸವ ಮಾಡಲು ಬಿಡಲಾರೆವು ಎಂದು ಗಂಡಿಬಾಗಿಲು ಶಾಲಾ ಮಕ್ಕಳ ಪೋಷಕರು ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ. ಗಂಡಿಬಾಗಿಲು ಶಾಲೆಯಲ್ಲಿ ಪ್ರಸಕ್ತ ಇರುವ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಪೋಷಕರು ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಶೀದ್ ಹಾಜಿ ಬಡ್ಡಮೆ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
250 ಇದ್ದ ಮಕ್ಕಳ ಸಂಖ್ಯೆ 150ಕ್ಕೆ ಇಳಿದಿದೆ:
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪೋಷಕರು ಗಂಡಿಬಾಗಿಲು ಶಾಲೆಯಲ್ಲಿ ಕಳೆದ 4 ವರ್ಷದ ಹಿಂದೆ 280 ಮಕ್ಕಳು ಇದ್ದರು, ಶಿಕ್ಷಕರ ಕೊರತೆ ಎದುರಾಗತೊಡಗಿದಂತೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿತು. ಇದೀಗ ಶಾಲೆಯಲ್ಲಿ ಮಕ್ಕಳ ಕೇವಲ 150ಕ್ಕೆ ಇಳಿದಿದೆ, ಶಾಲೆಗಳಿಗೆ ಶಿಕ್ಷಕರ ನೇಮಕ ಆಗದಿದ್ದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ಆಗಬಹುದು, ಅದು ಇಲ್ಲಿಂದಲೇ ಆರಂಭ ಆಗುತ್ತದೆಯೋ ಏನೋ ಎಂಬ ಆತಂಕ ಎದುರಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ದಾಖಲೆಯಲ್ಲಿ ಇದ್ದ ಶಿಕ್ಷಕರು ಶಾಲೆಯಲ್ಲಿ ಇಲ್ಲ:
ಶಾಲೆಯಲ್ಲಿ 8 ಹುದ್ದೆ ಮಂಜೂರಾತಿ ಇದೆ, ಆದರಲ್ಲಿ 3 ಶಿಕ್ಷಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ದಾಖಲೆ ಇದೆ. ಆದರೆ ಇಲ್ಲಿ ಖಾಯಂ ಆಗಿ ಸೇವೆಯಲ್ಲಿ ಇರುವುದು ಮುಖ್ಯ ಶಿಕ್ಷಕರು ಮತ್ತು ಇನ್ನೋರ್ವರು ಶಿಕ್ಷಕಿ ಮಾತ್ರ. ಇನ್ನು ಉಳಿದ ಓರ್ವರು ಉನ್ನತ ಶಿಕ್ಷಣಕ್ಕೆ ತೆರಳಿದ್ದಾರೆ. ಅದಾಗ್ಯೂ ಇಲ್ಲಿಗೆ ಓರ್ವರನ್ನು ನಿಯೋಜನೆ ಮಾಡಲಾಗಿ, ಮತ್ತೆ ಇಲ್ಲಿ 3 ಶಿಕ್ಷಕರು ಇರುವಂತೆ ತೋರಿಸಲಾಗಿದೆ. ಆದರೆ ನಿಯೋಜನೆ ಆಗಿ ಬಂದವರು ಹೆರಿಗೆ ರಜೆಯಲ್ಲಿ ತೆರಳಿದ್ದಾರೆ. ಹೀಗಾಗಿ ಇಲ್ಲಿ ದಾಖಲೆಯಲ್ಲಿ 4 ಶಿಕ್ಷಕರು ಇದ್ದಾರೆ ಎಂದು ಇದೆ ಹೊರತು ಇಲ್ಲಿ ಶಾಲೆಯಲ್ಲಿ ಇರುವಂತದ್ದು ಕೇವಲ ಇಬ್ಬರು ಮಾತ್ರ, ಇವರಲ್ಲಿ ಓರ್ವರು ಕಚೇರಿ ಕೆಲಸ, ಸಭೆಗಳಿಗೆ ತೆರಳುತ್ತಾರೆ. ಹೀಗಾಗಿ ಕೆಲವೊಮ್ಮೆ ಶಾಲೆಯಲ್ಲಿ ಕೇವಲ ಓರ್ವರು ಮಾತ್ರ ಶಾಲೆಯಲ್ಲಿ ಇರುವಂತದ್ದು, ಹೀಗಾದರೆ ನಮ್ಮ ಮಕ್ಕಳ ಶಿಕ್ಷಣದ ಭವಿಷ್ಯ ಏನು ಎಂದು ಅಸಮಾಧಾನ ವ್ಯಕ್ತಪಡಿಸಿದ ಪೋಷಕರು ಇಲ್ಲಿಗೆ ಟಿಜಿಟಿ ಸಹಿತ 5 ಖಾಯಂ ಶಿಕ್ಷಕರ ನೇಮಕ ಮಾಡಬೇಕು ಇಲ್ಲದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಸಭೆಯ ಗಮನ ಸೆಳೆದರು.
ಶಿಕ್ಷಣಾಧಿಕಾರಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ:
ಕಳೆದ 3 ವರ್ಷಗಳಿಂದ ಇಲ್ಲಿ ಶಿಕ್ಷಕರ ಕೊರೆತೆ ಇರುವಂತದ್ದು, ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿರುವ ಬಗ್ಗೆ ಶಿಕ್ಷಣಾಧಿಕಾರಿಯವರ ಗಮನಕ್ಕೆ ತರುತ್ತಿದ್ದೇವೆ, ಆದರೆ ಅವರು ಶಿಕ್ಷಕರ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ಕೊಡುತ್ತಾರೆ ಹೊರತು ವ್ಯವಸ್ಥೆ ಮಾಡುವುದಿಲ್ಲ, ಕೆಲವೊಮ್ಮೆ 150 ಮಕ್ಕಳ ಸಂಖ್ಯೆ ಅನುಗುಣವಾಗಿ ಶಿಕ್ಷಕರನ್ನು ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಶಾಲೆಯಲ್ಲಿ ಇರುವ ದಾಖಲೆಯಲ್ಲಿ ಇರುವ ಶಿಕ್ಷಕರನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ವಾಸ್ತವಾಂಶದ ಬಗ್ಗೆ ಅವರು ಚಿಂತಿಸುವುದಿಲ್ಲ. ಬೇರೆ ಶಾಲೆಯಲ್ಲಿ 78 ಮಕ್ಕಳಿದ್ದಾರೆ. ಅಲ್ಲಿ 6 ಖಾಯಂ ಶಿಕ್ಷಕರು ಇದ್ದಾರೆ. ಇಲ್ಲಿ ಶಿಕ್ಷಣಾಧಿಕಾರಿಯವರು ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ, ಶಿಕ್ಷಣಾಧಿಕಾರಿಯವರ ಈ ರೀತಿಯ ನಿಲುವು ಸರಿಯಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.
ಅತಿಥಿ ಶಿಕ್ಷಕರ ನೇಮಕ ವ್ಯವಸ್ಥೆ ಸರಿ ಇಲ್ಲ:
ಕಳೆದ 3 ವರ್ಷಗಳಿಂದ ಇಲ್ಲಿನ ಈ ಸಮಸ್ಯೆ ಬಗ್ಗೆ ಶಿಕ್ಷಣ ಇಲಾಖೆಗೆ ಅಧಿಕಾರಿಗಳಿಗೆ ತಿಳಿಸುತ್ತಲೇ ಇದ್ದೇವೆ, ಆದರೆ ಪೂರಕವಾದ ಸ್ಪಂಧನೆ ದೊರಕುತ್ತಿಲ್ಲ. ಕಳೆದ 2 ವರ್ಷಗಳಿಂದ ಇಲ್ಲಿಗೆ ಅತಿಥಿ ಶಿಕ್ಷಕರ ನೇಮಕಾತಿ ಆಗುತ್ತದೆ. ಆದರೆ ಅತಿಥಿ ಶಿಕ್ಷಕರು ಬರುವುದು ಆಗಸ್ಟ್ ತಿಂಗಳ ಬಳಿಕ, ಮತ್ತೆ ಅವರು ಮಾರ್ಚ್ ತಿಂಗಳ ಕೊನೆ ತನಕ ಮಾತ್ರ ಇರುತ್ತಾರೆ. ಈ ವ್ಯವಸ್ಥೆಯಿಂದಲೂ ಮಕ್ಕಳಿಗೆ ನಿರೀಕ್ಷಿತ ಪಾಠ ಪ್ರವಚನ ದೊರಕುತ್ತಿಲ್ಲ. ಅತಿಥಿ ಶಿಕ್ಷಕರನ್ನು ಶಾಲೆ ಪ್ರಾರಂಭದಿಂದಲೇ ನೇಮಕ ಮಾಡಿ ಶೈಕ್ಷಣಿಕ ವರ್ಷ ಮುಗಿಯುವ ತನಕ ಅವರು ಶಾಲೆಯಲ್ಲಿ ಇರುವಂತೆ ಮಾಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.
ತಾಪಂ. ಸಭೆಯಲ್ಲಿ ಪ್ರಸ್ತಾಪಿಸುವೆ-ಜಯಂತಿ ಆರ್. ಗೌಡ
ಸಭೆಯಲ್ಲಿದ್ದು, ಪೋಷಕರ ಸಮಸ್ಯೆ, ಬೇಡಿಕೆಯನ್ನು ಆಲಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಜಯಂತಿ ಆರ್. ಗೌಡ ಮಾತನಾಡಿ ಪೋಷಕರು ನೋವು, ಹತಾಶೆ ಅರ್ಥ ಆಗುತ್ತಿದೆ, ಇಲ್ಲಿಯದ್ದು ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು. ಮೆ. 24ಕ್ಕೆ ನಿಯೋಗ ಭೇಟಿಗೆ ನಿರ್ಧಾರ:
ಸಭೆಯಲ್ಲಿದ್ದ ಪೋಷಕರು ಇಲ್ಲಿ ಶಾಲೆಯಲ್ಲಿ ಪ್ರಾರಂಭೋತ್ಸವ ಮಾಡಬೇಕಾದರೆ, ಶಾಲೆಗೆ ಮಕ್ಕಳನ್ನು ಕಳುಹಿಸಿಕೊಡಬೇಕಾದರೆ ಜನಪ್ರತಿನಿಧಿಗಳು ಶಿಕ್ಷಕರ ನೇಮಕಾತಿ ಮಾಡಿಸಿಕೊಡುವ ಬಗ್ಗೆ ಭರವಸೆ ಕೊಡಬೇಕು ಮತ್ತು ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಶಿಕ್ಷಕರ ನೇಮಕಾತಿ ಆಗಬೇಕು ಎಂಬ ಬೇಡಿಕೆ ವ್ಯಕ್ತವಾಯಿತು. ಆಗ ತಾಪಂ ಸದಸ್ಯೆ ಶ್ರೀಮತಿ ಜಯಂತಿ ಗೌಡ, ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ, ಸದಸ್ಯರಾದ ಕೆ.ಎ. ಸುಲೈಮಾನ್, ವಿನೋದರ, ಶ್ರೀಮತಿ ಹೇಮಾವತಿ ಮಾತನಾಡಿ ಜನಪ್ರತಿನಿಧಿಗಳಾಗಿರುವ ನಾವುಗಳು ನಿಮ್ಮ ಜೊತೆ ಇದ್ದೇವೆ, ನಿಮ್ಮ ಬೇಡಿಕೆ ಅತ್ಯಂತ ಅಗತ್ಯವಾದುದಾಗಿರುತ್ತದೆ. ನಾವುಗಳು ನಿಯೋಗವೊಂದು ಶಿಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಅವರಿಗೆ ಸಮಸ್ಯೆಯ ಗಂಭೀರತೆ ತಿಳಿಸೋಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೋಷಕರು ನಾವು ಬರಲು ಸಿದ್ಧರಿದ್ದೇವೆ, ಎಂದರು ಅದರಂತೆ ಮೇ. 24ರಂದು ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಸ್ವಪ್ನ, ಸದಸ್ಯರುಗಳಾದ ಬಾಬು ಅಗರಿ, ಪೆರ್ನು, ಮಹಾಬಲೇಶ್ವರ ಭಟ್, ಮುಸ್ತಫಾ, ಇಸ್ಮಾಯಿಲ್, ಜಾನಕಿ, ಶ್ರೀಮತಿ ಉಷಾ, ಸರಸ್ವತಿ, ಬೇಬಿ ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.