ಅನುದಾನ ದುರ್ಬಳಕೆ ಮಾಡಿದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಯು.ಟಿ ಖಾದರ್
ಮಂಗಳೂರು, ಮೇ 22 :ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‌ಎಚ್‌ಎಂ)ದ ಅಡಿ ಬಡವರಿಗೆ ಉಚಿತ ಔಷಧ ಮತ್ತು ಚಿಕಿತ್ಸೆಗೆ ಕೇಂದ್ರ ಬಿಡುಗಡೆ ಮಾಡಿದ್ದಅನುದಾನ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆದು ಈ ಅನುದಾನ ದುರ್ಬಳಕೆಯಲ್ಲಿ ನನ್ನ ಪಾತ್ರ ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಆರೋಪಗೈದ ಬಿಬಿಎಂಪಿ ಪಾಲಿಕೆ ಮಾಜಿ ಸದಸ್ಯ ಎನ್.ಆರ್.ರಮೇಶ್ ಅವರು ಈ ಅವ್ಯವಹಾರದ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿ. ನಾನು ತನಿಖೆಗೆ ಸಿದ್ದನಿದ್ದೇನೆ ಎಂದು ಹೇಳಿದರು.
ಅವ್ಯವಹಾರದ ಆರೋಪ ಬಂದ ಕೂಡಲೆ ಈ ಬಗ್ಗೆ ಪ್ರಾಥಮಿಕ ವರದಿಯನ್ನು ತರಿಸಿಕೊಂಡು ಪರೀಶೀಲಿಸಿದ್ದೇನೆ. ಅದರಲ್ಲಿ ಯಾವುದೆ ಅವ್ಯವಹಾರವಾಗಿರುವುದು ಕಂಡುಬರುವುದಿಲ್ಲ. ಆರೋಪ ಮಾಡಿರುವವರು ಮಾಹಿತಿ ಕೊರತೆಯಿಂದ ಆರೋಪ ಮಾಡಿದ್ದಾರೆ. ಅವರು ಪ್ರಚಾರಕ್ಕಾಗಿ, ಇಲಾಖೆಗೆ ಕಪ್ಪು ಚುಕ್ಕೆ ತರಲು ನಿರಾಧಾರ ಆರೋಪ ಮಾಡಿದ್ದು ಅವರ ವಿರುದ್ದ ಮಾನನಷ್ಟ ಮೊಕದ್ದಮ್ಮೆ ಹೂಡಲು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಔಷಧಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಸಂಶಯವನ್ನು ನಿವಾರಿಸಲು ಸಾರ್ವಜನಿಕರು ಆರೋಗ್ಯ ಕೇಂದ್ರಗಳಲ್ಲಿ ನೀಡಲಾದ ಔಷಧಿಯ ಬಗ್ಗೆ ಅನುಮಾನಗಳಿದ್ದರೆ 104 ನಂಬರಿಗೆ ಕರೆ ಮಾಡಿ ದೂರು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
ಈ ಬಗ್ಗೆ ಜನಾರ್ದನ ಪೂಜಾರಿಯವರು ನೀಡಿರುವ ಸಲಹೆಯನ್ನು ಸ್ವೀಕರಿಸುತ್ತೇನೆ. ಅವರು ನನ್ನ ಒಳಿತಿಗಾಗಿ ಶ್ರಮಿಸಿದ್ದಾರೆ. ನಾನು ಮಂತ್ರಿಯಾಗಲು ಜನಾರ್ದನ ಪೂಜಾರಿಯವರು ಕಾರಣ. ಅವರು ನನ್ನ ಇಲಾಖೆಯನ್ನು ಕಂಟ್ರೋಲ್ ತೆಗೆದುಕೊಳ್ಳಬೇಕೆಂದು ತಿಳಿಸಿದ್ದು ಅದನ್ನು ಮುಂದೆ ಮಾಡುತ್ತೇನೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು ಪಶ್ಚಿಮವಾಹಿನಿ ಜಾರಿಗೆ ಧ್ವನಿಯೆತ್ತಬೇಕು:
ಎತ್ತಿನಹೊಳೆ ಯೋಜನೆಯ ಸದನದಲ್ಲಿ ಮಂಜೂರಾಗಿರುವುದರಿಂದ ಇನ್ನು ಯಾವ ಮುಖ್ಯಮಂತ್ರಿ, ಯಾವ ಸರ್ಕಾರ ಬಂದರೂ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದರ ವಿರುದ್ದ ಹೋರಾಟ ಮಾಡುವವರು ಪಶ್ಚಿಮವಾಹಿನಿ ಯೋಜನೆ ಜಾರಿಗೆ ಧ್ವನಿಯೆತ್ತಬೇಕಾದ ಅವಶ್ಯಕತೆಯಿದೆ. ಪಶ್ಚಿಮವಾಹಿನಿ ಯೋಜನೆ ಜಾರಿ ಬಗ್ಗೆ ನಾನು ಈಗಾಗಲೆ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು ಇದಕ್ಕಾಗಿ 800 ಕೋಟಿ ರೂಗಳ ಯೋಜನೆಯನ್ನು ರೂಪಿಸಲಾಗಿದೆ. ಇದರ ಜಾರಿಗೆ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು ಧ್ವನಿಯೆತ್ತಬೇಕಾಗಿದೆ. ಎತ್ತಿನಹೊಳೆ ಯೋಜನೆಯನ್ನು ಜನಾರ್ದನ ಪೂಜಾರಿಯವರು ಸಂಸದರಾಗಿದ್ದರೆ ಅವರು ಖಂಡಿತವಾಗಿಯು ನಿಲ್ಲಿಸುತ್ತಿದ್ದರು. ಆದರೆ ಜನರು ಅವರನ್ನು ಚುನಾಯಿಸಲಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಚಂದ್ರಹಾಸ ಕರ್ಕೆರಾ, ಮೊಹಮ್ಮದ್ ಮೋನು, ಮೆಲ್ವಿನ್, ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.