ಶೋಷಣೆ ಇಲ್ಲದ ಕಲೆಯನ್ನು ವೃತ್ತಿಯನ್ನಾಗಿಸುವುದರಲ್ಲಿ ತಪ್ಪಿಲ್ಲ: ಪೇಜಾವರ ಶ್ರೀ
ಉಡುಪಿ, ಮೇ 22: ಕಲೆ ಎಂಬುದು ವೃತ್ತಿಯೂ ಪ್ರವೃತ್ತಿಯೂ ಹೌದು. ಕಲೆಯನ್ನು ವೃತ್ತಿಯನ್ನಾಗಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೆ ಅದರಲ್ಲಿ ಯಾವುದೇ ರೀತಿಯ ಶೋಷಣೆ ಇಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ಕಲೆಯಲ್ಲಿ ನೀಡುವ ಸೇವೆಯು ಕಲಾ ದೇವತೆಗೆ ಸಲ್ಲಿಸುವ ನಿಷ್ಕಾಮ ಭಕ್ತಿಯಾಗಿದೆ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ರವಿವಾರ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಮಂಟಪಾಭಿನಂದನ ಸಮಾರಂಭದಲ್ಲಿ ಯಕ್ಷಗಾನ ಸ್ತ್ರೀವೇಷಧಾರಿ ಮಂಟಪ ಪ್ರಭಾಕರ ಉಪಾಧ್ಯ ರಿಗೆ ‘ತಲ್ಲೂರು ಕನಕಾ- ಅಣ್ಣಯ್ಯ ಶೆಟ್ಟಿ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು.
ನೃತ್ಯದ ಬಗ್ಗೆ ಶಾಸ್ತ್ರದಲ್ಲಿ ಸಾಕಷ್ಟು ಮಹತ್ವ ನೀಡ ಲಾಗಿದೆ. ನೃತ್ಯ ಭಗವಂತನ ಆರಾಧನೆಯ ದೊಡ್ಡ ಸಾರ. ನೃತ್ಯದಿಂದ ಭಗ ವಂತ ಹಾಗೂ ಜನರ ಆರಾಧನೆ ಮಾಡಬಹುದಾಗಿದೆ. ಭಗವಂತನನ್ನು ಒಲಿಸಿಕೊಳ್ಳುವ ಅನೇಕ ಪ್ರಕಾರಗಳಲ್ಲಿ ನೃತ್ಯವೂ ಒಂದು ಎಂದು ಅವರು ಹೇಳಿದರು.
ಯಕ್ಷಗಾನ ಕಲೆಯಲ್ಲಿರುವ ಸ್ತ್ರೀವೇಷಧಾರಿಗಳು ಸ್ತ್ರೀಯರನ್ನು ಮೀರಿಸುವ ರೀತಿಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಇದು ಯಕ್ಷಗಾನ ಕಲೆಗೆ ಸಿಗುತ್ತಿರುವ ದೊಡ್ಡ ಕೊಡುಗೆಯಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಂಟಪ ಪ್ರಭಾಕರ ಉಪಾಧ್ಯ, ಬದುಕಿನ ಪಾಠ ಅನುಭವಕ್ಕೆ ಬಂದದ್ದು ಕಲೆಯಿಂದ. ಕಲೆಯು ಬದುಕಿನ ಅತ್ಯಂತ ವಿಶ್ರಾಂತಿ ಧಾಮವಾಗಿದೆ. ಕಲೆ ಎಂಬುದು ಕೇವಲ ಮನರಂಜನೆಗೆ ಮಾತ್ರ ವಲ್ಲದೆ ಬದುಕನ್ನು ನಿರಂತರವಾಗಿ ವಿಸ್ತರಿಸಲು ಮುಖ್ಯವಾಗಿದೆ. ಕಲೆ ಸದಾ ಕಾಲ ಸಮಾಜದಲ್ಲಿ ಇರಬೇಕಾದರೆ ಸಮಾಜ ಅದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಈಗಾಗಲೇ 1321 ಏಕವ್ಯಕ್ತಿ ಯಕ್ಷ ಗಾನ ಪ್ರದರ್ಶನ ನೀಡಿರುವ ಮಂಟಪ ಪ್ರಭಾಕರರು 1500 ಪ್ರದರ್ಶನ ನೀಡಬೇಕೆಂಬುದು ನನ್ನ ಆಸೆ. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗು ವುದು. ಇವರು ಯಕ್ಷಗಾನದಲ್ಲಿ ಅವರದ್ದೆ ಆದ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಶಾಸ್ತ್ರೀಯ ಕಲೆಗಳಲ್ಲಿ ಇಲ್ಲದ ಸ್ವಾತಂತ್ರ ಯಕ್ಷಗಾನ ಕಲೆಯಲ್ಲಿ ಇದೆ. ಯಕ್ಷಗಾನಕ್ಕೆ ಸಾಂಸ್ಕೃತಿಕವಾದ ಚೌಕಟ್ಟು ಬರಬೇಕಾಗಿದೆ. ಇದರ ಬೇರು ಇನ್ನಷ್ಟು ಆಳಕ್ಕೆ ಹೋಗಿ ಜಾಗತಿಕ ಮಟ್ಟದಲ್ಲಿ ವಿಸ್ತಾರಗೊಳ್ಳಬೇಕು. ಅದಕ್ಕೆ ಹೊಸ ಚಿಂತನೆಗಳು ನಡೆಯಬೇಕಾಗಿವೆ ಎಂದು ಅವರು ತಿಳಿಸಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವ ಚನ ನೀಡಿದರು. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ, ಮಂಗಲಾ ಪ್ರಭಾಕರ ಉಪಾಧ್ಯಾಯ, ಕಲಾರಂಗ ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಮುರಲೀ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.