×
Ad

ಕಾಸರಗೋಡನ್ನು ಕಾಡುತ್ತಿದೆ ನೀರಿನ ಸಮಸ್ಯೆ

Update: 2016-05-22 23:47 IST

ಕಾಸರಗೋಡು, ಮೇ 22: ನೀರಿನ ಅಭಾವ ಕಾಸರಗೋಡು ಜಿಲ್ಲೆಯಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಂತರ್ಜಲ ಮಟ್ಟ ಕೂಡಾ ಕುಸಿದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ 300 ಮೀ.ಗಿಂತ ಕೆಳಗೆ ಅಂತರ್ಜಲ ಮಟ್ಟ ಕುಸಿದಿದೆ ಎಂದು ಭೂಜಲ ಇಲಾಖೆಯ ಅಧ್ಯಯನದಿಂದ ತಿಳಿದು ಬಂದಿದೆ. ಈ ಪ್ರದೇಶಗಳಲ್ಲಿ 600ರಿಂದ 700 ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ಲಭಿಸದ ಸ್ಥಿತಿ ಉಂಟಾಗಿದೆ. ಆದರೆ ಕಾಸರಗೋಡು ಬ್ಲಾಕ್‌ನ ಹಲವಡೆ ಕೊಳವೆಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ.
 ಸದ್ಯ ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯಿದ್ದು, ತೆರೆದ ಬಾವಿಗಳು, ಕೆರೆಗಳು, ಹೊಳೆಗಳು ಸೇರಿದಂತೆ ಜಲಮೂಲಗಳು ಬತ್ತಿ ಹೋಗಿವೆ. ಇದರ ಜೊತೆಗೆ ಅಂತರ್ಜಲ ಕುಸಿತ ನೀರಿನ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
  ಕೇರಳದಲ್ಲಿ ಕಾಸರಗೋಡು ಬ್ಲಾಕ್ ಅಲ್ಲದೆ ತಿರುವನಂತಪುರದ ಅಂದಿಯನ್ನೂರು, ಕೋಝಿಕ್ಕೋಡ್, ಪಾಲಕ್ಕಾಡ್‌ನ ಚಿಟ್ಟೂರು ಮಳಂಬುಯ ಬ್ಲಾಕ್‌ಗಳನ್ನು ಅಂತರ್ಜಲ ಕುಸಿತಕ್ಕೊಳಗಾಗಿರುವ ಜಿಲ್ಲೆಗಳನ್ನಾಗಿ ಈಗಾಗಲೇ ಗುರುತಿಸಲಾಗಿದೆ. ಈ ಜಿಲ್ಲಾ ವ್ಯಾಪ್ತಿಯ 33 ಗ್ರಾಮ ಪಂಚಾಯತ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಇದು ಗಂಭೀರ ಸ್ವರೂಪ ವಲಯ ಎಂದು ಗುರುತಿಸಲಾಗಿದೆ. ಗಂಭೀರ ಸ್ವರೂಪ ಹೊಂದಿರುವ ಈ ಪ್ರದೇಶಗಳಲ್ಲಿ ಗೃಹ ಬಳಕೆ ನೀರಿಗೂ ಕೊಳವೆಬಾವಿ ಕೊರೆಯುವುದಕ್ಕೆ ಕಠಿಣ ನಿಯಂತ್ರಣ ಹೇರಲಾಗಿದೆ.
 ಕಣ್ಣೂರು, ವಯನಾಡು, ಇಡುಕ್ಕಿ ಮೊದಲಾದಡೆಗಳಲ್ಲೂ ಅಂತರ್ಜಲ ಮಟ್ಟ ಕುಸಿದಿದ್ದು, ಇದರಿಂದ 60 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅಧ್ಯಯನ ವರದಿ ತಿಳಿಸಿದೆ. ಮಳೆಯ ಅಭಾವ ಹಾಗೂ ಮಳೆ ನೀರು ಭೂಮಿಯೊಳಗೆ ಸೇರದಿರುವುದು ಅಂತರ್ಜಲ ಮಟ್ಟ ಕುಸಿಯಲು ಮಾತ್ರವಲ್ಲ ಕುಡಿಯುವ ನೀರಿನ ಸಮಸ್ಯೆಗೂ ಕಾರಣವಾಗುತ್ತಿದೆ. ಮಳೆ ನೀರು ಭೂಮಿಯಡಿಗೆ ಸೇರದಿದ್ದಲ್ಲಿ ಮುಂದಿನ ವರ್ಷಗಳಲ್ಲಿ ನೀರೇ ಲಭ್ಯವಾಗದ ಸ್ಥಿತಿ ತಲೆದೋರುವ ಭೀತಿ ಎದುರಾಗಿದೆ.
 ಕ್ರಿಟಿಕಲ್ ಮತ್ತು ನಾನ್ ಕ್ರಿಟಿಕಲ್ ಎಂಬ ಎರಡು ವಿಧದಲ್ಲಿ ನೀರಿನ ಲಭ್ಯತೆ  ಅಲಭ್ಯತೆಯನ್ನು ಇಲಾಖೆ ಗುರುತಿಸಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದು ಮುಂದಿನ ದಿನಗಳಲ್ಲಿ ಅತೀ ಅಗತ್ಯವಾಗಿದೆ.
    ಅಣೆಕಟ್ಟು, ತಡೆಗೋಡೆ, ಮಳೆ ನೀರು ಸಂಗ್ರಹ ಮೊದಲಾದ ಯೋಜನೆಗಳನ್ನು ಅತೀ ಶೀಘ್ರದಲ್ಲಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಭೂ ಗರ್ಭ ಜಲ ಇಲಾಖೆ ಯೋಜನೆ ಹಾಕಿಕೊಂಡಿದೆ. ಈಗಾಗಲೇ ನೀರಿನ ಅಭಾವ ತಲೆದೋರಿರುವುದರಿಂದ ಇಂತಹ ಯೋಜನೆಗಳಿಗೆ ಮುಂದೆ ಬರದಿದ್ದಲ್ಲಿ ಮುಂದಿನ ವರ್ಷಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News