×
Ad

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಬಂಟ್ವಾಳ ತಾಪಂ ಅಧ್ಯಕ್ಷರು

Update: 2016-05-23 18:36 IST

ಬಂಟ್ವಾಳ, ಮೇ 23: ಇಲ್ಲಿನ ತಾಲೂಕು ಪಂಚಾಯತ್ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸೋಮವಾರ ಬಿ.ಸಿ.ರೋಡಿನ ಎಸ್‌ಜಿಎಸ್‌ಆರ್‌ವೈ ಸಬಾಂಗಣದಲ್ಲಿ ನಡೆದ ತಾಪಂ ಪ್ರಥಮ ಸಾಮಾನ್ಯ ಸಭೆಯಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜನಪ್ರತಿನಿಧಿಗಳು, ಸಾರ್ವಜನಿಕರು ಸಮಸ್ಯೆಗಳಿಗೆ ಸಂಬಂಧಿಸಿ ಕರೆ ಮಾಡಿದಾಗ ಅಧಿಕಾರಿಗಳು ಉದಾಸಿನ ತೋರದೆ ತಕ್ಷಣ ಸ್ಪಂದಿಸುವ ಮೂಲಕ ಕಾರ್ಯ ದಕ್ಷತೆ ಮೆರೆಯಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಎಲ್ಲವನ್ನು ಕಾನೂನಿನ ದೃಷ್ಟಿಯಲ್ಲೇ ನೋಡದೆ ಅದರ ಹೊರತಾಗಿ ಜನ ಸಾಮಾನ್ಯರ ಹಿತದೃಷ್ಟಿಯಿಂದ ಸಮಸ್ಯೆಯನ್ನು ಪರಿಹರಿಸುವ ದೆಸೆಯಲ್ಲಿ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದ ಅವರು, ಬಂಟ್ವಾಳ ತಾಲೂಕನ್ನು ರಾಜ್ಯದಲ್ಲೇ ಮಾದರಿ ತಾಲೂಕು ಪಂಚಾಯತ್ ಆಗಿ ರೂಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಸದಸ್ಯರು ಆಡಳಿತದೊಂದಿಗೆ ಕೈ ಜೋಡಿಸಬೇಕು. ಮುಂದಿನ ಸಭೆಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ಸದಸ್ಯರಿಗೆ ತಮ್ಮ ಇಲಾಖೆಯಲ್ಲಾದ ಪ್ರಗತಿಯ ಬಗ್ಗೆ ಪಾಲನಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಿದ ಅವರು, ಸದಸ್ಯರು ಕೇಳುವ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡದೆ ಸ್ಪಷ್ಟವಾದ ಮಾಹಿತಿ ನೀಡಬೇಕೆಂದರು.

ತಾಲೂಕು ಪಂಚಾಯತ್‌ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆಯಾಗಿ ಮಾಜಿ ಜಿಪಂ ಸದಸ್ಯೆಯೂ ಆದ ಧನಲಕ್ಷ್ಮೀ ಬಂಗೇರ ಅವಿರೋಧವಾಗಿ ಆಯ್ಕೆಯಾದರು.

ಇದೇ ವೇಳೆ ತಾಲೂಕು ಪಂಚಾಯತ್ ಸಭೆಯಲ್ಲಿ ಭಾಗವಹಿಸಲು ತಾಲೂಕಿನ 12 ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರನ್ನು ಚೀಟಿ ಎತ್ತುವ ಮೂಲಕ ಆಯ್ಕೆಗೊಳಿಸಲಾಯಿತು. ಸಂಗಬೆಟ್ಟು, ಪಂಜಿಕಲ್ಲು, ಪಿಲಾತಬೆಟ್ಟು, ಮೇರಮಜಲು, ಗೋಳ್ತಮಜಲು, ಸಜಿಪಮೂಡ, ನರಿಕೊಂಬು, ಅನಂತಾಡಿ, ಕರಿಯಂಗಳ, ವೀರಕಂಬ, ನರಿಂಗಾಣ, ಪುಣಚ ಗ್ರಾಪಂನ ಅಧ್ಯಕ್ಷರುಗಳನ್ನು ಮುಂದಿನ ಒಂದು ವರ್ಷದ ಅವಧಿಗೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಆಯ್ಕೆಮಾಡಲಾಯಿತು.

ಉಪಾಧ್ಯಕ್ಷ ಅಬ್ಬಾಸ್ ಅಲಿ ವೇದಿಕೆಯಲ್ಲಿದ್ದರು. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಕಾರ್ಯ ಕಲಾಪ ನಡೆಸಿಕೊಟ್ಟರು. ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾವಾರು ಮಾಹಿತಿ ನೀಡಿದರು.

ಸದಸ್ಯರಾದ ಕುಮಾರ ಭಟ್, ಹೈದರ್, ರಮೇಶ್ ಕುಡ್‌ಮೇರು, ಪ್ರಭಾಕರ್ ಪ್ರಭು, ಸಂಜೀವ ಪೂಜಾರಿ, ಗಣೇಶ್ ಸುವರ್ಣ, ಮಲ್ಲಿಕಾ ವಿ. ಶೆಟ್ಟಿ, ಗಾಯತ್ರಿ ಸಫಲ್ಯ ಹಾಗೂ ಜಿಪಂ ಸದಸ್ಯರಾದ ಮಮತಾ ಗಟ್ಟಿ, ಮಂಜುಳಾ ಎಂ. ಮಾವೆ, ರವೀಂದ್ರ ಕಂಬಳಿ, ಪದ್ಮಶೇಖರ್ ಜೈನ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ಆಡಳಿತ ಪಕ್ಷದ ಸದಸ್ಯ ಗರಂ

ತಾಲೂಕು ಪಂಚಾಯತ್ ಹಿರಿಯ ಸದಸ್ಯ, ಮಾಜಿ ಉಪಾಧ್ಯಕ್ಷ ಉಸ್ಮಾನ್ ಕರೋಪಾಡಿ ಮೊದಲ ಸಾಮಾನ್ಯ ಸಭೆಯಲ್ಲೇ ಆಡಳಿತ ಪಕ್ಷದ ವಿರುದ್ಧ ಗರಂ ಆದ ಪ್ರಸಂಗವೂ ನಡೆಯಿತು. ಹೊಸ ಆಡಳಿತ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಸಭಾಂಗಣದ ಮೈಕ್‌ನ ವ್ಯವಸ್ಥೆ ಸರಿಪಡಿಸದಿರುವುದು ಸೇರಿದಂತೆ ಸಣ್ಣ ಪುಟ್ಟ ವಿಚಾರಗಳಿಗೂ ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಆರ್‌ಟಿಇನಡಿ 182 ವಿದ್ಯಾರ್ಥಿಗಳು ಆಯ್ಕೆ

ತಾಲೂಕಿನಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಅರ್ಜಿ ಸಲ್ಲಿಸಿದವರ ಪೈಕಿ ಮೊದಲ ಹಂತದಲ್ಲಿ 182 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಆದಂ ಕುಂಞಿ, ಜಿ.ಪಂ.ಸದಸ್ಯೆ ಮಮತಾ ಗಟ್ಟಿ, ಆರ್‌ಟಿಇ ವಿಚಾರದಲ್ಲಿ ತಾಲೂಕಿನ ಹಲವು ಪೋಷಕರಲ್ಲಿ ಇನ್ನೂ ಗೊಂದಲಗಳು ಇವೆ, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಳಜಿಯಿಂದ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದರು.

ಇದೇ ವೇಳೆ ತಾಲೂಕಿಗೆ ಶೇ. 90ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿದ್ದು, ಈಗಾಗಲೇ ಶಾಲೆಗಳಿಗೆ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News