×
Ad

ಕೇರಳ ಚುನಾವಣೆಯಲ್ಲಿ ಸ್ಪರ್ಧೆ: ಕುಂಟಾರು ರವೀಶ ತಂತ್ರಿಗೆ ನೋಟಿಸ್

Update: 2016-05-23 19:05 IST

ಪುತ್ತುರು, ಮೇ 23: ಕೇರಳ ರಾಜ್ಯದ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ತಂತ್ರಿ ಹಾಗೂ ಸೀಮೆಯ ಧಾರ್ಮಿಕ ಮಾರ್ಗದರ್ಶಕ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

ಕುಂಟಾರು ರವೀಶ್ ತಂತ್ರಿಯವರು ಚುನಾವಣೆಗೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಅವರನ್ನು ತಂತ್ರಿ ಸ್ಥಾನದಿಂದ ಯಾಕೆ ಬದಲಾಯಿಸಬಾರದು ಎಂದು ಕಾರಣ ಕೇಳಿ ಸೋಮವಾರ ನೋಟಿಸ್ ನೀಡಲಾಗಿದೆ. 10 ದಿನಗಳೊಳಗೆ ಈ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಕುಂಟಾರು ರವೀಶ ತಂತ್ರಿ ಕಳೆದ 18 ವರ್ಷಗಳಿಂದ ಪುತ್ತೂರು ದೇವಾಲಯದ ತಂತ್ರಿ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ರವೀಶ ತಂತ್ರಿ ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ತಮಗೆ ನೋಟಿಸ್ ನೀಡಿರುವ ಕುರಿತು ಸ್ಪಷ್ಟಪಡಿಸಿರುವ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ನೋಟಿಸ್‌ಗೆ ಉತ್ತರ ನೀಡಲು ಕಾಲಾವಕಾಶ ಇದೆ. ಧಾರ್ಮಿಕ ಮತ್ತು ಕಾನೂನಿನ ಇತಿಮಿತಿಯೊಳಗೆ ಪರಿಶೀಲನೆ ಮಾಡಿ ನೋಟಿಸ್‌ಗೆ ಉತ್ತರ ನೀಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News