ತೊಕ್ಕೊಟ್ಟು: ಸಚಿವ ಯು.ಟಿ.ಖಾದರ್ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ
ಉಳ್ಳಾಲ, ಮೇ 23: ಔಷಧ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಸುಲೋಚನಾ ಭಟ್, ಸಚಿವ ಖಾದರ್ ಅವರು ರಾಜ್ಯದಲ್ಲಿ ನಂ.1 ಎನಿಸಿಕೊಂಡಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿತ್ತು. ಆದರೆ ಇದೀಗ ಕೋಟ್ಯಂತರ ಹಗರಣದಲ್ಲಿ ಭಾಗಿಯಾಗಿ ಜಿಲ್ಲೆಯ ಮರ್ಯಾದೆಯನ್ನೇ ಹರಾಜಿಗಿಟ್ಟಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದ ವ್ಯಕ್ತಿಯೋರ್ವರು ಮಾಹಿತಿ ಹಕ್ಕು ಕಾಯ್ದೆಯಡಿ ಅಧಿಕೃತವಾಗಿ ತೆಗೆದಿರುವ ಮಾಹಿತಿಯನ್ನು ಸುಳ್ಳೆಂದು ಹೇಳುವುದರಲ್ಲಿ ಅರ್ಥವಿಲ್ಲ. ನಕಲಿ ಕಂಪೆನಿಗಳ ಹೆಸರಿನಲ್ಲಿ ಕೇಂದ್ರ ಸರಕಾರದ ಹಣ ಲಪಟಾಯಿಸಿರುವುದು ಯಾವ ನ್ಯಾಯ ಎಂದು ಎಂದು ಹೇಳಿದರು.
ಅರಣ್ಯ, ರಾಷ್ಟ್ರೀಯ ಹೆದ್ದಾರಿ, ಪರಿಸರ ಇಲಾಖೆಗಳ ಅನುಮತಿ ದೊರೆಯದೇ ಇದ್ದರೂ, ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ವಿಧಾನಸಭೆಯಲ್ಲಿ ಅಂಗೀಕರಿಸಿ ಯೋಜನೆಯನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಅನ್ನುತ್ತಿದ್ದಾರೆ. ಆರೋಪಗಳು ಕೇಳಿಬಂದಾಗ ಟೆಂಡರ್ ಆಗಿರುವುದು ಸಚಿವರ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಯಾವ ರೀತಿಯ ಅರಾಜಕತೆ ಸೃಷ್ಟಿಯಾಗಿದೆ ಎನ್ನುವುದನ್ನು ಎಲ್ಲರೂ ಗಮನಿಸಬೇಕಿದೆ ಎಂದರು.
ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, 15 ಲಕ್ಷ ಕೋಟಿ ರೂ. ವಕ್ಫ್ ಆಸ್ತಿಯನ್ನು ಕಾಂಗ್ರೆಸ್‌ನವರು ನುಂಗಿದ್ದಾರೆ. ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ನುಂಗಲು ಮುಂದಾಗಿದ್ದಾರೆ. ಇಂತಹ ಜನರಿಗೆ ಕೆಡುಕು ಬಯಸುವ ಸರಕಾರಕ್ಕೆ ಶಾಪ ತಟ್ಟದೆ ಇರಲಾರದು ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರುಗಳಾದ ನಿತಿನ್ ಕುಮಾರ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಮೊದಲಾದವರು ಉಪಸ್ಥಿತರಿದ್ದರು.