×
Ad

ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಜಾತಿ ಅಡ್ಡಿಯಾಗಬಾರದು: ಫಾರೂಕ್ ಉಳ್ಳಾಲ್

Update: 2016-05-23 20:21 IST

ಉಳ್ಳಾಲ, ಮೇ 23: ಗ್ರಾಮದಲ್ಲಿರುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸರ್ವರ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ಜಾತಿ, ಧರ್ಮ, ಅಂತಸ್ತು ಅಡ್ಡಿಯಾಗಬಾರದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಎಸ್ಕೆಎಸ್ಸೆಸ್ಸೆಫ್ ಹರೇಕಳ ಗ್ರಾಮ ಸಮಿತಿ ಆಶ್ರಯದಲ್ಲಿ ರವಿವಾರ ಹರೇಕಳ ಕಡವಿನ ಬಳಿ ನಡೆದ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಕ್ಷರ ಸಂತ ಹಾಜಬ್ಬ ಸಹಿತ ಹರೇಕಳದಲ್ಲಿ ವಿವಿಧ ಪ್ರತಿಭಾವಂತರಿದ್ದಾರೆ. ಅಂತಹವರನ್ನು ಧಾರ್ಮಿಕ ಸಂಘಟನೆಯಾಗಿರುವ ಎಸ್ಕೆಸ್ಸೆಸ್ಸೆಪ್ ಗುರುತಿಸುತ್ತಿರುವುದು ಶ್ಲಾಘನೀಯ. ಅಲ್ಲದೆ, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಪುಸ್ತಕ ವಿತರಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಶಿಕ್ಷಣದ ವಿಚಾರದಲ್ಲಿ ನೀಡುವ ಹಣವೂ ದಾನವಾಗಿದೆ ಎಂದು ಇಸ್ಲಾಂನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ದೇರಿಕಟ್ಟೆ ಮಸ್ಜಿದುಲ್ ಹುದಾ ಖತೀಬ್ ಸಮೀರ್ ಪೈಝಿ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಣಕ್ಕೆ ಇಸ್ಲಾಂ ಮಹತ್ವ ನೀಡಿದ್ದು ಈ ವಿಚಾರದಲ್ಲಿ ಶ್ರಮಿಸುವುದು ಹಾಗೂ ದೇಣಿಗೆ ನೀಡುವುದು ಅತ್ಯಂತ ಪುಣ್ಯದಾಯಕವಾಗಿದ್ದು, ಅದರ ಪ್ರತಿಫಲ ಪರಲೋಕದಲ್ಲಿ ಸಿಗಲಿದೆ ಎಂದು ತಿಳಿಸಿದರು. ಹಿರಿಯ ಮುಖಂಡ ಹುಸೈನ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಸ್ಸೆಸ್ಸೆಪ್ ಕಳೆದ ಐದು ವರ್ಷಗಳಿಂದ ಪುಸ್ತಕ ವಿತರಣೆ, ಸ್ಥಳೀಯ ಸಾಧಕರಿಗೆ ಸನ್ಮಾಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಸೇವೆ ಮೂಲಕ ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವ ಖಾಲಿದ್‌ರನ್ನು ಸನ್ಮಾನಿಸಲಾಯಿತು.

ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ, ಅಕ್ಷರ ಸಂತ ಹರೇಕಳ ಹಾಜಬ್ಬ, ಉಳ್ಳಾಲ ಸಂಶುಲ್ ಉಲಮಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ಮೊಯ್ದೀನ್, ಉದ್ಯಮಿ ಅದ್ದು ಹಾಜಿ, ದೇರಿಕಟ್ಟೆ ಮಸ್ಜಿದುಲ್ ಹುದಾ ಅಧ್ಯಕ್ಷ ಮುಹಮ್ಮದ್, ಎಸ್ಕೆಸ್ಸೆಸ್ಸೆಫ್ ಹರೇಕಳ ಘಟಕಾಧ್ಯಕ್ಷ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.

ಎಸ್ಕೆಸ್ಸೆಸ್ಸೆಫ್ ಹರೇಕಳ ಘಟಕದ ಮಾಜಿ ಅಧ್ಯಕ್ಷ ರಝಾಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News