ನಾನು ಎಲ್ಲಧರ್ಮ ಹಾಗೂ ಸಮಾಜದ ಪ್ರತಿನಿಧಿ: ಶಾಸಕ ಮಾಂಕಾಳು ವೈದ್ಯ
ಭಟ್ಕಳ, ಮೇ 23: ಚುನಾವಣೆಯಲ್ಲಿ ನನಗೆ ಮತ ನೀಡಿದವರು, ನೀಡದವರು ಎಲ್ಲರೂ ಒಂದೇ. ನಾನು ಸರ್ವಧರ್ಮ, ಸಮುದಾಯದ ಜನಪ್ರತಿನಿಧಿಯಾಗಿದ್ದೇನೆ ಎಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳು ವೈದ್ಯ ಹೇಳಿದ್ದಾರೆ.
ಅವರು ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಘಟನೆಯ ವತಿಯಿಂದ ಸೋಮವಾರ ತಂಝೀಮ್ ಸಭಾಂಗಣದಲ್ಲಿ ಆಯೋಜಿಸಿದ್ದ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಸರ್ವ ಜಮಾಅತ್ ಸದಸ್ಯರ ಪ್ರತಿನಿಧಿ ಮಂಡಳಿ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದರು.
ಗ್ರಾ.ಪಂ., ಪಂ.ಪಂ., ಹಾಗೂ ಜಿಲ್ಲಾಪಂಚಾಯತ್‌ನ ನೂತನ ಚುನಾಯಿತ ಸದಸ್ಯರೊಂದಿಗೆ ಕ್ಷೇತ್ರದ ಸರ್ವ ಮುಸ್ಲಿಮ್ ಜಮಾಅತ್ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರವುದರ ಮೂಲಕ ತಂಝೀಮ್ ಮಹತ್ತರ ಕಾರ್ಯ ಮಾಡಿದೆ. ಇದರಿಂದಾಗಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದ ಅವರು, ಸಭೆಯಲ್ಲಿ ಚರ್ಚಿಸಲ್ಪಟ್ಟ ಸಮಸ್ಯೆಗಳು ಜನಸಾಮಾನ್ಯರ ಸಮಸ್ಯೆಗಳಾಗಿವೆ. ನಾನು ಯಾವತ್ತು ಬಡಜನರ ಪರವಾಗಿದ್ದು ಬಡವರ ಏಳಿಗೆಗೆ ಶ್ರಮಿಸುವುದೇ ನನ್ನ ಗುರಿಯಾಗಿದೆ. ಮುಸ್ಲಿಮ್ ಸಮುದಾಯದಲ್ಲಿನ ಪ್ರತಿಯೊಂದು ಸಮಸ್ಯೆಯನ್ನು ನಾನು ಕುಲಂಕುಷವಾಗಿ ಅಧ್ಯಯನ ಮಾಡಿದ್ದು ಮುಂದಿನ ದಿನಗಳಲ್ಲಿ ಆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಶಾಸಕರು ನಾನು ಕೇವಲ ಕೆಲಸ ಮಾಡುತ್ತೇನೆ. ಪ್ರಚಾರ ಮಾಡಿಕೊಳ್ಳುವುದಿಲ್ಲ. ಆದರೆ ಬಿಜೆಪಿಗರು ಕೆಲಸ ಮಾಡದೇ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ನನಗೆ ಮತ ಹಾಕಲಿಲ್ಲ ಅಥವಾ ಮುಂದೆ ನನಗೆ ಮತ ನೀಡಬೇಕು ಎನ್ನುವ ಉದ್ದೇಶದಿಂದ ನಾನು ಕೆಲಸ ಮಾಡುತ್ತಿಲ್ಲ. ಓರ್ವ ಶಾಸಕನಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಯಾರದೇ ಟೀಕೆಗಳಿಗೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ ಮಾತನಾಡಿ, ನಾವು ಚುನಾವಣೆ ಪೂರ್ವ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಅವರು ಕೆಲಸ ಮಾಡುತ್ತೇನೆಂದು ಪ್ರಮಾಣಿಸಿದ್ದರಿಂದಲೆ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇವೆ. ಈಗ ನಮ್ಮ ಕೆಲಸ ಮುಗಿದಿದೆ. ನಿಮ್ಮ ಕ್ಷೇತ್ರದ ಅಭಿವೃದ್ದಿ, ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ನಿಮ್ಮ ಕರ್ತವ್ಯವಾಗಿದೆ. ಜನರು ಓಟು ನೀಡಿದ್ದಾರೆ ಅದಕ್ಕಾಗಿ ನೀವು ನಿಮ್ಮ ಕರ್ತವ್ಯವನ್ನು ಮರೆಯದೆ ಜನರಿಗಾಗಿ ಕೆಲಸ ಮಾಡಿ ಎಂದು ಚುನಾಯಿತ ಪ್ರತಿನಿಧಿಗಳಿಗೆ ಕಿವಿ ಮಾತು ಹೇಳಿದರು.
ತಂಝೀಮ್ ರಾಜಕೀಯ ಪೆನಲ್ ಸಂಚಾಲಕ ಅಬ್ದುಲ್ ರಕೀಬ್‌ಎಂ.ಜೆ. ಪ್ರಾಸ್ತಾವಿಕವಾಗಿ ಮತನಾಡಿದರು. ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಧನ್ಯವಾದ ಅರ್ಪಿಸಿದರು. ಅಬ್ದುಲ್ಲಾದಾಮೂದಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್‌ಖರೂರಿ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ್, ಜಿ.ಪಂ.ಸದಸ್ಯೆ ಪುಷ್ಪಾ ನಾಯ್ಕ, ದೀಪಕ್ ನಾಯ್ಕ, ಸೇರಿದಂತೆ ಭಟ್ಕಳ ಹೊನ್ನಾವರ ಕ್ಷೇತ್ರದ ತಾ.ಪಂ.ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಟ್ಕಳದಲ್ಲಿ ಭಯೋತ್ಪಾದಕರು ಇಲ್ಲ, ಈಗಲೂ ಇದನ್ನೇ ಹೇಳುತ್ತೇನೆ: ಮಾಂಕಾಳು ವೈದ್ಯ
ಭಟ್ಕಳದಲ್ಲಿ ಭಯೋತ್ಪಾದಕರಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಗರು ತಮ್ಮದೇಕೇಂದ್ರ ಸರ್ಕಾರವಿದೆ. ಇದ್ದರೆ ಅದನ್ನು ಸಿಬಿಐಗೆ ವಹಿಸಿ ಭಯೋತ್ಪಾದಕರನ್ನು ಬಂಧಿಸಲಿ. ಯಾವನೋ ಮುಂಬೈ ಅಥವಾ ದೂರದ ಊರಿನಲ್ಲಿ ಮಾಡಿದ ಕೃತ್ಯವನ್ನು ಭಟ್ಕಳಕ್ಕೆ ಹೋಲಿಸಿ ಭಟ್ಕಳ ಭಯೋತ್ಪಾದಕರ ತವರೂರು ಎಂದು ಬೊಬ್ಬೆ ಹೊಡೆಯುವುದು ಎಷ್ಟು ಸರಿ?ಎಂದು ಪ್ರಶ್ನಿಸಿದ ಶಾಸಕ ವೈದ್ಯ, ಈಗಲೂ ನಾನು ಭಟ್ಕಳದಲ್ಲಿ ಭಯೋತ್ಪಾದಕರು ಇಲ್ಲ ಎಂದೇ ಹೇಳುತ್ತೇನೆ.
ಒಂದು ವೇಳೆ ಭಯೋತ್ಪಾದಕರು ಇದ್ದರೆ ಅದಕ್ಕೆ ಕಾನೂನು ಇದೆ. ಯಾರು ಭಯೋತ್ಪಾದಕರು ಎನ್ನುವುದನ್ನು ಕಂಡು ಶಿಕ್ಷೆ ನೀಡುವುದು ಸರಕಾರಕ್ಕೆ ಬಿಟ್ಟಿದ್ದು. ಭಯೋತ್ಪಾದಕರ ಪ್ರಕಣವನ್ನು ಸಿಬಿಐಗೆ ಒಪ್ಪಿಸಿ. ಅವರು ತಮ್ಮ ಕೆಲಸ ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ಭಟ್ಕಳದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಬೇಡಿ. ಇದಕ್ಕೆ ನಾನು ಅವಕಾಶ ಮಾಡಿಕೊಡುವುದಿಲ್ಲ ಎಂದರು.