ಡಾ.ಎಲ್.ಎಚ್.ಮಂಜುನಾಥ್‌ಗೆ ಜೀವಮಾನ ಸಾಧನಾ ಪ್ರಶಸ್ತಿ
ಬೆಳ್ತಂಗಡಿ, ಮೇ 23: ಪಶುವೈದ್ಯಕೀಯ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ನಾಲ್ಕು ದಶಕಗಳ ವೈಶಿಷ್ಟ್ಯಪೂರ್ಣ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್‌ರಿಗೆ ಕರ್ನಾಟಕ ಪಶುವೈದ್ಯಕೀಯ ಸಂಘದಿಂದ 2016-17ನೆ ಸಾಲಿನ ಜೀವಮಾನ ಸಾಧನಾ ಪ್ರಶಸ್ತಿ ಗೌರವವನ್ನು ನೀಡಿ ಗೌರವಿಸಲಾಗಿದೆ.
1970-75ನೆ ಬ್ಯಾಚ್‌ನ ಬೆಂಗಳೂರು ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಡಾ.ಎಲ್.ಎಚ್.ಮಂಜುನಾಥ್‌ರಿಗೆ ಅಂದು ಕಾಲೇಜಿನ ನಿರ್ದೇಶಕರಾಗಿದ್ದ, ಕರ್ನಾಟಕ ಪಶುವೈದ್ಯಕೀಯ ಶಿಕ್ಷಣ ಕ್ಷೇತ್ರದ ಪಿತಾಮಹರೆಂದು ಗುರುತಿಸಲ್ಪಟ್ಟ ಡಾ.ಆರ್.ಡಿ.ನಂಜಯ್ಯರ ಜನ್ಮ ಶತಮಾನೋತ್ಸವದಲ್ಲಿ ಡಾ.ಆರ್.ಡಿ.ನಂಜಯ್ಯ ಸ್ಮಾರಕ ಜೀವಮಾನ ಸಾಧನಾ ಪ್ರಶಸ್ತಿ ದೊರೆತಿರುವುದು ವೈಶಿಷ್ಟ್ಯಪೂರ್ಣವಾಗಿದೆ.
ಕರಾವಳಿ ಕರ್ನಾಟಕದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಡಾ.ಎಲ್.ಎಚ್.ಮಂಜುನಾಥ್ ಪಶು ಸಂಗೋಪನೆ, ಪಶುವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತರಾಗಿದ್ದು, ಗ್ರಾಮಾಭಿವೃದ್ಧಿ, ದುರ್ಬಲರ ಸಂಘಟನೆ, ಸ್ವಸಹಾಯ ಸಂಘ ಚಳುವಳಿ, ಸ್ವಉದ್ಯೋಗ ಕ್ಷೇತ್ರಗಳಲ್ಲಿ ಬಹಳಷ್ಟು ಕಾಲ ಕೆಲಸ ಮಾಡಿದ್ದಾರೆ. 2000ದಲ್ಲಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪ್ರಶಸ್ತಿಯೂ ದೊರಕಿತ್ತು.