ಚಿಕನ್ ಕರಿಯಿಂದ ಗ್ರಾಹಕನ ಪ್ರಾಣಕ್ಕೇ ಸಂಚಕಾರ

Update: 2016-05-23 16:21 GMT

ಲಂಡನ್ , ಮೇ 23 : ಕಡಲೆ ಅಲರ್ಜಿ ಇರುವ ಗ್ರಾಹಕನಿಗೆ ನೆಲಗಡಲೆ ಇರುವ ಚಿಕನ್ ಪದಾರ್ಥ ನೀಡಿ ಆತನ ಸಾವಿಗೆ ಕಾರಣವಾಗಿರುವ  ಬ್ರಿಟನ್ ನ ಭಾರತೀಯ ರೆಸ್ಟೋರೆಂಟ್ ಒಂದರ ಮಾಲಕ 6 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. 

ಇಂತಹ ಪ್ರಕರಣ ಹಾಗು ಶಿಕ್ಷೆ ಇದೇ ಮೊದಲು ಎಂದು ಹೇಳಲಾಗಿದೆ. ಪೌಲ್ ವಿಲ್ಸನ್ ಎಂಬ 38ವರ್ಷದ ಗ್ರಾಹಕನಿಗೆ ಕಡಲೆಯಿಂದ ಅಲರ್ಜಿ ಸಮಸ್ಯೆ ಇತ್ತು. ಅದಕ್ಕಾಗಿ ಆತ ಕಡಲೆ ಅಂಶ ಇಲ್ಲದ ಚಿಕನ್ ಟಿಕ್ಕಾ ಮಸಾಲ ಕೇಳಿದ್ದ. ಆದರೆ ಮೊಹಮ್ಮದ್ ಝಮಾನ್ ಮಾಲಕತ್ವದ ಹೋಟೆಲ್ ನಲ್ಲಿ ನೆಲಗಡಲೆ ಅಂಶ ಇರುವ ಕಡಲೆ ಮಿಕ್ಸ್ ಹಾಕಿ ತಯಾರಿಸಿದ ಚಿಕನ್ ಪದಾರ್ಥವನ್ನೇ ನೀಡಲಾಗಿತ್ತು. 

2014 ರ ಜನವರಿಯಲ್ಲಿ ನಡೆದ ಈ ಪ್ರಕರಣದಲ್ಲಿ ಆ ಚಿಕನ್ ಪದಾರ್ಥ ಸೇವಿಸಿದ ಬಳಿಕ ತೀವ್ರ ಅನಾರೋಗ್ಯಕ್ಕೆ ಒಳಗಾದ ಪೌಲ್ ತಮ್ಮ ಮನೆಯ ಶೌಚಾಲಯದಲ್ಲಿ ಬಿದ್ದು ಮೃತ ಪಟ್ಟಿದ್ದರು. ಇದಕ್ಕೂ ಮೊದಲು ಈ ಹೋಟೆಲ್ ನ 17 ವರ್ಷದ ಓರ್ವ ಗ್ರಾಹಕಿ ಕೂಡ ಇದೇ ರೀತಿ ಅಲರ್ಜಿ ಗೆ ಒಳಗಾಗಿ ಬಳಿಕ ಚಿಕಿತ್ಸೆ ಪಡೆದಿದ್ದರು. 

ಝಮಾನ್ ಗೆ ಒಟ್ಟು 6 ಹೋಟೆಲ್ ಗಳಿದ್ದು ಹೆಚ್ಚು ಖರ್ಚು ತಗಲುವ ಬಾದಾಮ್ ಪುಡಿಯ ಬದಲಿಗೆ ಕಡಲೆಯ ಪುಡಿ ಬಳಸಿ ಗ್ರಾಹಕರ ಜೀವದೊಂದಿಗೆ ಚೆಲ್ಲಾಟ ಆಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈಗ ಅವರ ಅಪರಾಧ ಸಾಬೀತಾಗಿ ಶಿಕ್ಷೆಯಾಗಿದೆ. 

" ಲಾಭಕ್ಕಾಗಿ ಝಮಾನ್ ನೀತಿ ನಿಯಮಗಳನ್ನು ಗಾಳಿಗೆ ತೂರಿ ಜೀವನದ ಪ್ರಮುಖ ಘಟ್ಟದಲ್ಲಿದ್ದ ವ್ಯಕ್ತಿಯ ಅಮೂಲ್ಯ ಜೀವ ಬಲಿ ಹಾಕಿದ್ದಾರೆ. ಮೃತಪಟ್ಟ ಪೌಲ್ ಕೂಡ ಕ್ಯಾಟರಿಂಗ್ ಉದ್ಯಮದಲ್ಲಿದ್ದರೂ ಅವರು ಝಮಾನ್ ನಂತೆ ನಿರ್ಲಕ್ಷ್ಯ ತೋರುತ್ತಿರಲಿಲ್ಲ " ಎಂದು ನ್ಯಾಯಾಧೀಶ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News