×
Ad

ಉಗ್ರವಾದ ವಿರುದ್ಧ ಹೋರಾಟ: ಭಾರತ-ಇರಾನ್ ಶಪಥ

Update: 2016-05-23 22:31 IST

 ಟೆಹರಾನ್, ಮೇ 23: ಭಯೋತ್ಪಾದನೆ ಹಾಗೂ ತೀವ್ರವಾದದ ವಿರುದ್ಧ ಜಂಟಿಯಾಗಿ ಹೋರಾಡಲು ಭಾರತ ಹಾಗೂ ಇರಾನ್ ಸೋಮವಾರ ಪ್ರತಿಜ್ಞೆ ಕೈಗೊಂಡಿದ್ದು, ಪ್ರಾಂತದಲ್ಲಿ ‘ಉಲ್ಬಣಿಸಿರುವ ಹಾಗೂ ವ್ಯಾಪಿಸುತ್ತಿರುವ’ ಉಗ್ರವಾದದ ಪಿಡುಗನ್ನು ಮಟ್ಟಹಾಕುವ ಉದ್ದೇಶದಿಂದ ಗುಪ್ತಚರ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳಲು ಸಮ್ಮತಿಸಿವೆ.

 ಇರಾನ್‌ಗೆ ಎರಡು ದಿನಗಳ ಪ್ರವಾಸವನ್ನು ಕೈಗೊಂಡಿರುವ ಮೋದಿ ಇಂದು ಟೆಹರಾನ್‌ನಲ್ಲಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಜೊತೆ ನಡೆಸಿದ ನಿಯೋಗ ಮಟ್ಟದ ಮಾತುಕತೆಯಲ್ಲಿ ಪ್ರಾಂತದಲ್ಲಿನ ಅಸ್ಥಿರತೆ, ಉಗ್ರವಾದ ಹಾಗೂ ಭಯೋತ್ಪಾದನೆಯ ಹರಡುವಿಕೆಯ ಬಗ್ಗೆ ಚರ್ಚಿಸಿದರು. ಮಾತುಕತೆಯ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ, ‘‘ಭಾರತ ಹಾಗೂ ಇರಾನ್‌ಗಳು, ಪ್ರಾದೇಶಿಕ ಶಾಂತಿ, ಸ್ಥಿರತೆ ಹಾಗೂ ಪ್ರಗತಿಯಲ್ಲಿ ನಿರ್ಣಾಯಕ ಪಾಲುದಾರಿಕೆಯನ್ನು ಹೊಂದಿದೆ. ನಮ್ಮ ಪ್ರಾಂತ್ಯದಲ್ಲಿ ಅಸ್ಥಿರತೆ, ತೀವ್ರವಾದ ಹಾಜಿಗೂ ಭಯೋತ್ಪಾದನೆಯ ಶಕ್ತಿಗಳು ಹರಡುತ್ತಿರುವುದರ ಬಗ್ಗೆಯೂ ನಮ್ಮ ಕಳವಳಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ’’ ಎಂದು ತಿಳಿಸಿದರು. ಭಯೋತ್ಪಾದನೆ, ತೀವ್ರವಾದ, ಮಾದಕದ್ರವ್ಯ ಕಳ್ಳಸಾಗಣೆ ಹಾಗೂ ಸೈಬರ್ ಅಪರಾಧಗಳ ವಿರುದ್ಧ ಹೋರಾಟುವ ನಿಟ್ಟಿನಲ್ಲಿ ಎರಡೂ ದೇಶಗಳ ನಿಕಟವಾಗಿ ಹಾಗೂ ನಿಯಮಿತವಾಗಿ ಸಮಾಲೋಚನೆ ನಡೆಸಲು ಸಮ್ಮತಿಸಿವೆ’’ ಎಂದವರು ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ರೂಹಾನಿ ಮಾತನಾಡಿ, ವಿಶೇಷವಾಗಿ ಅಫ್ಘಾನಿಸ್ತಾನ, ಇರಾಕ್,ಸಿರಿಯ ಹಾಗೂ ಯೆಮೆನ್‌ನಂತಹ ದೇಶಗಳಲ್ಲಿ ಸ್ಥಿರತೆ ಹಾಗೂ ಭದ್ರತೆಯನ್ನು ಕಾಪಾಡುವುದು ಅತ್ಯಂತ ಮುಖವಾಗಿರುವುದರಿಂದ ಉಭಯದೇಶಗಳು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲು ಹಾಗೂ ಬೇಹುಗಾರಿಕೆ ಮಾಹಿತಿಗಳನ್ನು ಹಂಚಿಕೊಳ್ಳಲಿವೆ’’ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News