×
Ad

ಹಿರೋಶಿಮಾ ದುರಂತಕ್ಕೆ ಕ್ಷಮೆಯಾಚಿಸಲಾರೆ: ಒಬಾಮ

Update: 2016-05-23 22:34 IST

ಟೋಕಿಯೊ,ಮೇ 25: ದ್ವಿತೀಯ ಜಾಗತಿಕ ಯುದ್ಧದ ವೇಳೆ ಜಪಾನ್‌ನ ಹಿರೋಶಿಮಾ ನಗರದ ಮೇಲೆ ನಡೆಸಿದ ಅಣುಬಾಂಬ್ ದಾಳಿಗೆ ಅಮೆರಿಕವು ಕ್ಷಮೆಯಾಚಿಸುವುದಿಲ್ಲವೆಂದು ಅಧ್ಯಕ್ಷ ಬರಾಕ್ ಒಬಾಮ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಯುದ್ಧದ ಸಂದರ್ಭದಲ್ಲಿ ಜಾಗತಿಕ ನಾಯಕರು, ಇಂತಹ ಕೆಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆದರೆ ಅದಕ್ಕಾಗಿ ಕ್ಷಮೆ ಕೇಳಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.

 ‘‘ಯಾವುದೇ ಘಟನೆಗೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳುವುದು, ಸಂಶೋಧನೆಗಳನ್ನು ನಡೆಸುವುದು ಇತಿಹಾಸಕಾರರ ಕರ್ತವ್ಯವಾಗಿದೆ. ಅದೇ ರೀತಿ ವಿಶೇಷವಾಗಿ ಯುದ್ಧದ ಸಂದರ್ಭಗಳಲ್ಲಿ ವಿವಿಧ ನಿರ್ಧಾರಗಳನ್ನು ಕೈಗೊಳ್ಳುವುದು ನಾಯಕರ ಕರ್ತವ್ಯವಾಗಿದೆ. ಏಳು ವರ್ಷಗಳಿಂದ ಅಮೆರಿಕ ಅಧ್ಯಕ್ಷನಾಗಿರುವ ತಾನು ಇದನ್ನು ಮನಗಂಡಿದ್ದೇನೆ’’ ಎಂದು ಒಬಾಮ ತಿಳಿಸಿದರು.

ಜಪಾನಿನ ಹಿರೋಶಿಮಾ ಹಾಗೂ ನಾಗಾಸಾಕಿ ನಗರಗಳ ಮೇಲೆ ಅಮೆರಿಕ ನಡೆಸಿದ ಅಣುಬಾಂಬ್ ಆಕ್ರಮಣಕ್ಕಾಗಿ ಅಧ್ಯಕ್ಷ ಬರಾಕ್ ಒಬಾಮ ಕ್ಷಮೆಯಾಚಿಸಬೇಕೆಂದು ಎರಡನೆ ವಿಶ್ವಮಹಾಯುದ್ಧದ ಸಂತ್ರಸ್ತರು ಆಗ್ರಹಿಸಿದ್ದರು.

 1945ರ ಆಗಸ್ಟ್ 6ರಂದು ಹಿರೋಶಿಮಾದಲ್ಲಿ ಅಮೆರಿಕ ನಡೆಸಿದ ಅಣುಬಾಂಬ್ ದಾಳಿಯಲ್ಲಿ 1.40 ಲಕ್ಷ ಮಂದಿ ಮೃತಪಟ್ಟಿದ್ದರು. ಇದಾದ ಮೂರು ದಿನಗಳ ಬಳಿಕ ನಾಗಾಸಾಕಿಯಲ್ಲಿ ಅಮೆರಿಕ ಎರಡನೆ ಅಣುಬಾಂಬ್ ದಾಳಿ ನಡೆಸಿದಾಗ 74 ಸಾವಿರ ಮಂದಿ ಸಾವನ್ನಪ್ಪಿದರು.ಏಶ್ಯ ಪ್ರವಾಸ ಕೈಗೊಂಡಿರುವ ಒಬಾಮ, ಈ ತಿಂಗಳ 27ರಂದು ಹಿರೋಶಿಮಾಕ್ಕೆ ಭೇಟಿ ನೀಡಲಿದ್ದಾರೆ.

 ಅಣುಬಾಂಬ್ ದಾಳಿಯ ನಡೆದ ಹಲವು ದಶಕಗಳ ಬಳಿಕ ಹಿರೋಶಿಮಾ ಸಂದರ್ಶಿಸಿದ ಪ್ರಪ್ರಥಮ ಅಮೆರಿಕ ಅಧ್ಯಕ್ಷ ಒಬಾಮ ಅವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News