ಶ್ರೀನಗರ: ಉಗ್ರಗಾಮಿಗಳಿಂದ ಮೂವರು ಪೊಲೀಸರ ಹತ್ಯೆ
ಶ್ರೀನಗರ, ಮೇ 23: ನಗರದಲ್ಲಿ ಸೋಮವಾರ ಮುಂಜಾನೆಯಿಂದೀಚೆಗೆ ಒಬ್ಬ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸಹಿತ ಮೂವರು ಪೊಲೀಸ್ ಸಿಬ್ಬಂದಿಯನ್ನು ಉಗ್ರಗಾಮಿಗಳು ಕೊಂದಿದ್ದಾರೆ.
ಮೊದಲ ದಾಳಿಯಲ್ಲಿ ಇಬ್ಬರು ಮೋಟಾರ್ ಸೈಕಲ್ ಸವಾರ ಭಯೋತ್ಪಾದಕರು ಶ್ರೀನಗರದ ಝಡಿಬಾಲ್ ಪ್ರದೇಶದಲ್ಲಿ ಬೆಳಗ್ಗೆ 10:45ರ ವೇಳೆ ದಾಳಿ ನಡೆಸಿ ಇಬ್ಬರು ಪೊಲೀಸರನ್ನು ಗುಂಡಿಟ್ಟು ಕೊಂದಿದ್ದಾರೆ.
ಉಗ್ರರು ಸೌರಾದಲ್ಲಿ ಶ್ರೀನಗರವನ್ನು ಹಜರತ್‌ಬಾಲ್ ಪ್ರಾರ್ಥನಾಲಯ ಹಾಗೂ ಸ್ಕಿಮ್ಸ್ ಆಸ್ಪತ್ರೆಗಳನ್ನು ಜೋಡಿಸುವ ಝಡಿಬಾಲ್ ಪ್ರದೇಶದ ಮಿಲ್ ಸ್ಟಾಪ್‌ನಲ್ಲಿ ನಿಕಟ ಅಂತರದಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಪೊಲೀಸರೂ ಸ್ಥಳದಲ್ಲೇ ಕೊನೆಯಸಿರೆಳೆದಿದ್ದಾರೆ. ಅವರನ್ನು ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಗುಲಾಂ ಮುಹಮ್ಮದ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ನಝೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ಅವರು, ಝಡಿಬಾಲ್ ಠಾಣೆಯ ಸಿಬ್ಬಂದಿಯಾಗಿದ್ದರು.
ಹಂತಕರು ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಇತರ ಭದ್ರತಾ ಪಡೆಗಳನ್ನು ಪೊಲೀಸರೊಂದಿಗೆ ನಿಯೋಜಿಸಲಾಗಿದೆ.