×
Ad

ಗೋಹಂತಕರೆಂಬ ಅನುಮಾನದಿಂದ ಮಥುರಾದಲ್ಲಿ ಮುಸ್ಲಿಮನ ಹತ್ಯೆ

Update: 2016-05-23 22:50 IST

ಮಥುರಾ(ಉತ್ತರ ಪ್ರದೇಶ), ಮೇ 23: ಗೋಮಾಂಸ ಭಕ್ಷಣೆ ವದಂತಿಯಿಂದ ಉತ್ತರ ಪ್ರದೇಶದ ದಾದ್ರಿಯಲ್ಲಿ ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಹಾಗೂ ಜಾರ್ಖಂಡ್‌ನ ಬಲೂಮತ್ ಎಂಬಲ್ಲಿ ಜಾನುವಾರು ವ್ಯಾಪಾರಿಗಳಿಬ್ಬರನ್ನು ಹತ್ಯೆ ಗೈದು ಮರಕ್ಕೆ ನೇತುಹಾಕಿದ ಪೈಶಾಚಿಕ ಘಟನೆಯ ನೆನಪು ಅಳಿಯುವ ಮುನ್ನವೇ, ಗೋಹಂತಕ ಎಂಬ ಅನುಮಾನದಿಂದ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಗ್ರಾಮಸ್ಥರು ಹತ್ಯೆ ಮಾಡಿರುವ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

ಭಾನುವಾರ ಮಧ್ಯರಾತ್ರಿಯಿಂದ ಗ್ರಾಮದಲ್ಲಿ ವಾಹನವೊಂದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಗ್ರಾಮಸ್ಥರ ಸಂದೇಹಕ್ಕೆ ಕಾರಣ. ಆ ವಾಹನವನ್ನು ಹಿಂಬಾಲಿಸಿದಾಗ ಅದರಲ್ಲಿ ನಾಲ್ಕು ಹಸುಗಳನ್ನು ಸಾಗಾಟ ಮಾಡುತ್ತಿದ್ದುದು ಗಮನಕ್ಕೆ ಬಂತು. ಅದನ್ನು ತಡೆಯಲು ಯತ್ನಿಸಿದಾಗ ವಾಹನದಲ್ಲಿದ್ದವರು ಗುಂಡಿನ ದಾಳಿಗೆ ಮುಂದಾದರು ಎಂದು ಎಸ್ಪಿ ಅರುಣ್‌ಕುಮಾರ್ ಹೇಳಿದ್ದಾರೆ.
ಗ್ರಾಮಸ್ಥರು ಪ್ರತಿದಾಳಿ ನಡೆಸಿದಾಗ ಜಾನುವಾರು ಮಾರಾಟಗಾರರು ಗಾಯಗೊಂಡರು ಎಂದು ಕುಮಾರ್ ವಿವರಿಸಿದ್ದಾರೆ. ಶಸ್ತ್ರಧಾರಿಗಳಾಗಿದ್ದ ಗ್ರಾಮಸ್ಥರು ಶಹಬುದ್ದೀನ್ ಎಂಬ ಗಾಯಾಳುವನ್ನು ಪೊಲೀಸರಿಗೆ ಒಪ್ಪಿಸಿದರು. ಆದರೆ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಮೃತಪಟ್ಟರು ಎನ್ನುವುದು ಪೊಲೀಸ್ ವಿವರಣೆ.
ಈ ಭಾಗದಲ್ಲಿ ಜಾನುವಾರು ಕಳ್ಳರು ವ್ಯಾಪಕವಾಗಿದ್ದು, ಗ್ರಾಮಸ್ಥರು ಹಾಗೂ ಇವರ ನಡುವೆ ಸಂಘರ್ಷಗಳು ಸಾಮಾನ್ಯ ಎಂದು ಪೊಲೀಸ್ ವೃತ್ತಾಧಿಕಾರಿ ಪಿಯೂಷ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News