×
Ad

ಸ್ವದೇಶಿ ಸ್ಟೇಸ್‌ಶಟ್ಲ್‌ನ ಒಳಗಿನ ಕಥೆ

Update: 2016-05-23 22:51 IST

ತಿರುವನಂತಪುರ, ಮೇ 23: ಕೇರಳದ ಮೀನುಗಾರಿಕೆ ಗ್ರಾಮವೊಂದರ ವಿಮಾನಾಶ್ರಮವೊಂದರಲ್ಲಿ 600ಕ್ಕೂ ಹೆಚ್ಚು ವಿಜ್ಞಾನಿಗಳು ಕಳೆದ 5 ವರ್ಷಗಳಲ್ಲಿ ನಡೆಸಿದ ಪ್ರಯತ್ನ ಭಾರತವು ಅಂತರಿಕ್ಷ ಶೋಧದಲ್ಲಿ ಅತ್ಯಂತ ವಿಶಿಷ್ಟ ಮೈಲುಗಲ್ಲೊಂದನ್ನು ಸ್ಥಾಪಿಸುವುದರೊಂದಿಗೆ ಸಾಕಾರಗೊಂಡಿದೆ.
ಭಾರತದ ತೀರಾ ಸ್ವಂತ, ಮರು ಬಳಸಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಎಂದು ಕರೆಯಲಾಗಿರುವ ಸ್ಪೇಸ್ ಶಟ್ಲ್ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಘಟನೆ-ಇಸ್ರೊದಿಂದ ಇಲ್ಲೇ ಜನ್ಮ ತಾಳಿತು ಹಾಗೂ ಘೋಷಿಸಲ್ಪಟ್ಟಿತ್ತು.
ಯೋಜನೆಯು ಒಂದು ದಶಕದ ಹಿಂದೆಯೇ, ದೇಶದ ಪ್ರಧಾನ ರಾಕೆಟ್ ವಿನ್ಯಾಸ ಹಾಗೂ ರಚನಾ ಪ್ರಯೋಗ ಶಾಲೆಯಾಗಿರುವ ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಆರಂಭಗೊಂಡಿತ್ತು.
ಎನ್‌ಡಿಟಿವಿಯ ವಿಜ್ಞಾನ ಸಂಪಾದಕ ಪಲ್ಲವ ಬಾಗ್ಲಾರಿಗೆ ಭವಿಷ್ಯದ ಬಾಹ್ಯಾಕಾಶ ವಿಮಾನದ ನಿರ್ಮಾಣವನ್ನು ಪ್ರತ್ಯಕ್ಷ ನೋಡುವ ಅತ್ಯಪೂರ್ವ ಸದವಕಾಶ ಲಭಿಸಿತ್ತು.
6.5 ಮೀ. ಉದ್ದದ ಮರುಬಳಸಬಹುದಾದ ಉಡಾವಣಾ ವಾಹನದ ಮಾದರಿಯ ತೂಕ ಸುಮಾರು 1.75 ಟನ್ ಹಾಗೂ ತಗಲಿದ ವೆಚ್ಚ ರೂ.95 ಕೋಟಿ. ಅದರ ಅಂತಿಮ ರೂಪವು ಆರು ಪಟ್ಟು ಹೆಚ್ಚು-ಅಂದರೆ ಅಂದಾಜು 40 ಮೀ. ಉದ್ದವಿರಲಿದ್ದು, ಅದು ಸುಮಾರು 2030ರೊಳಗೆ ಸಿದ್ಧಗೊಳ್ಳಲಿದೆ. ಅದಕ್ಕೆ ಮೊದಲು ಇನ್ನೆರಡು ಪ್ರಾಯೋಗಿಕ ಮಾದರಿಗಳ ಪರೀಕ್ಷಾ ಹಾರಾಟವನ್ನು ಇಸ್ರೊ ನಡೆಸಲಿದೆ.
ಬಾಹ್ಯಾಕಾಶ ವಿಮಾನದ ಎಲ್ಲ ವ್ಯವಸ್ಥೆಗಳು ನಿಖರವಾಗಿ ಕೆಲಸ ಮಾಡುತ್ತವೆಂಬುದನ್ನು ಖಚಿತಪಡಿಸಿಕೊಳ್ಳಲು ತನ್ನ ತಂಡವು ಅನೇಕ ವರ್ಷಗಳ ಕಾಲ ಸಮಯದ ಪರಿವೆಯಿಲ್ಲದೆ ಕೆಲಸ ಮಾಡಿದೆಯೆಂದು ಆರ್‌ಎಲ್‌ವಿಯ ಯೋಜನಾ ನಿರ್ದೇಶಕ ಶ್ಯಾಂಮೋಹನ್ ತಿಳಿಸಿದ್ದಾರೆ.
ಭಾರತಕ್ಕಾಗಿ ಆರ್‌ಎಲ್‌ವಿಯನ್ನು ವಿನ್ಯಾಸಿಸಲು ತನ್ನನ್ನು 15 ವರ್ಷಗಳ ಹಿಂದೆ ಆರಿಸಲಾಗಿತ್ತು. ಮರುಬಳಕೆಯ ಉಡಾವಣಾ ವಾಹನ ನಿರ್ಮಾಣವು ಜಟಲವಾದ ಹಾಗೂ ಸವಾಲಿನ ಕೆಲಸವಾಗಿತ್ತು. ಆ ಕನಸು ಇದೀಗ ನನಸಾಗಿದೆಯೆಂದು ಇಸ್ರೊದಲ್ಲಿ ಮೂರು ದಶಕಗಳನ್ನು ಕಳೆದಿರುವ 53ರ ಹರೆಯದ ಮೋಹನ್ ಹೇಳಿದ್ದಾರೆ.
ಅಮೆರಿಕನ್ನರು ತಮ್ಮ ಸ್ಪೇಸ್ ಶಟ್ಲನ್ನು 135 ಬಾರಿ ಯಶಸ್ವಿಯಾಗಿ ಹಾರಿಸಿದ್ದಾರೆ. 2011ರಲ್ಲಿ ಆರ್ಥಿಕ ಅಡಚಣೆಯಿಂದಾಗಿ ಅವರು ಅದನ್ನು ನಿಲ್ಲಿಸಿದ್ದರು. ರಶ್ಯನ್ನರು 1989ರಲ್ಲಿ ಕೇವಲ ಒಂದು ಬಾರಿ ಮಾತ್ರ ಅದನ್ನು ಹಾರಿಸಿದ್ದರು. ಇತರ ಬಾಹ್ಯಾಕಾಶ ಸಂಸ್ಥೆಗಳು ಪ್ರಯತ್ನಿಸಿ ವಿಫಲವಾಗಿರುವ ಸಾಹಸವನ್ನು ಮಾಡಲು ಭಾರತವೀಗ ಧೈರ್ಯವಾಗಿ ಹೊರಟಿದೆ.
ದೊಡ್ಡದಾದ ‘ಹನುಮ ಲಂಘನ’ದೆಡೆಗೆ ಇದೊಂದು ಮೊದಲ ಪುಟ್ಟ ಹೆಜ್ಜೆಯಷ್ಟೇ ಎಂದು ತಿರುವನಂತಪುರದ ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕ ಕೆ.ಶಿವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News