×
Ad

ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಚುನಾವಣಾ ಭರವಸೆಗಳ ಈಡೇರಿಕೆಗೆ ಜಯಾ ಚಾಲನೆ

Update: 2016-05-23 22:53 IST


ಚೆನ್ನೈ,ಮೇ 23: ಎಡಿಎಂಕೆ ಅಧಿನಾಯಕಿ ಜೆ.ಜಯಲಲಿತಾ ಅವರು ಸೋಮವಾರ ಆರನೆ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಮೊದಲ ದಿನವೇ ಐದು ಕಡತಗಳಿಗೆ ಸಹಿ ಹಾಕುವ ಮೂಲಕ ತನ್ನ ಚುನಾವಣಾ ಭರವಸೆಗಳ ಈಡೇರಿಕೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು. ಪ್ರತಿ ಎರಡು ತಿಂಗಳಿಗೆ 100 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, ಮದುವೆಯಾಗುವ ದುರ್ಬಲ ವರ್ಗಗಳ ಹೆಣ್ಣುಮಕ್ಕಳಿಗೆ ಎಂಟು ಗ್ರಾಂ ಚಿನ್ನ ಮತ್ತು ಹಂತಹಂತವಾಗಿ ಪಾನನಿಷೇಧದ ಆದೇಶಗಳಿಗೆ ಈ ಕಡತಗಳು ಸಂಬಂಧಿಸಿವೆ. ಈಗಾಗಲೇ 200 ಯೂನಿಟ್ ವಿದ್ಯುತ್ ಪಡೆಯುತ್ತಿರುವ ಕೈಮಗ್ಗ ನೇಕಾರರಿಗೆ ಎರಡು ತಿಂಗಳ ಅವಧಿಗೆ ಹೆಚ್ಚುವರಿಯಾಗಿ 550 ಯೂನಿಟ್ ಉಚಿತ ವಿದ್ಯುತ್ ಪೂರೈಸುವ ಆದೇಶಕ್ಕೂ ಅವರು ಸಹಿ ಹಾಕಿದರು.
ಪಾನ ನಿಷೇಧದ ಮೊದಲ ಹಂತದಲ್ಲಿ ಸರಕಾರಿ ಸ್ವಾಮ್ಯದ ಟಾಸ್ಮಾಕ್(ತಮಿಳುನಾಡು ರಾಜ್ಯ ಮಾರಾಟ ನಿಗಮ)ವು ನಡೆಸುತ್ತಿರುವ ಮದ್ಯದಂಗಡಿಗಳ ಕಾರ್ಯಾಚರಣೆಯ ಅವಧಿಯನ್ನು ಕಡಿತಗೊಳಿಸಲಾಗಿದೆ. ನಾಳೆಯಿಂದ ಈ ಅಂಗಡಿಗಳು ಬೆಳಗ್ಗೆ 10ರ ಬದಲು ಮಧ್ಯಾಹ್ನ 12 ಗಂಟೆಗೆ ತೆರೆಯಲಿವೆ. ಇತರ ಕ್ರಮಗಳಲ್ಲಿ ಟಾಸ್ಮಾಕ್ ಅಂಗಡಿಗಳ ಸಂಖ್ಯೆಯಲ್ಲಿ ಕಡಿತ ಮತ್ತು ಬಾರ್ ಹೊಂದಿರುವ ಅಂಗಡಿಗಳ ಮುಚ್ಚುಗಡೆ ಸೇರಿವೆ. ಈಗಾಗಲೇ ರಾಜ್ಯದಲ್ಲಿಯ 500 ಮದ್ಯದಂಗಡಿಗಳನ್ನು ಮುಚ್ಚಲಾಗಿದೆ.
ಮದ್ಯದ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯಪಾನ ವರ್ಜನ ಕೇಂದ್ರಗಳನ್ನು ಸ್ಥಾಪಿಸಲೂ ಸರಕಾರವು ಉದ್ದೇಶಿಸಿದೆ.
ಪಾನನಿಷೇಧ ಜಯಲಲಿತಾರ ಚುನಾವಣಾ ಭರವಸೆಗಳಲ್ಲಿ ಪ್ರಮುಖವಾಗಿತ್ತು.
ತನ್ನ ಬದ್ಧವೈರಿ ಎ.ಕರುಣಾನಿಧಿ ಮತ್ತು ಅವರ ಡಿಎಂಕೆ ಪಕ್ಷವು 1971ರಲ್ಲಿ ಪಾನನಿಷೇಧವನ್ನು ಹಿಂದೆಗೆದುಕೊಂಡು ನಂತರದ ಪೀಳಿಗೆಗೆ ಮದ್ಯದ ರುಚಿಯನ್ನು ತೋರಿಸಿತ್ತು ಎಂದು ಜಯಲಲಿತಾ ಚುನಾವಣಾ ಪ್ರಚಾರದ ಸಂದರ್ಭ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News