ಚುಟುಕು ಸುದ್ದಿಗಳು

Update: 2016-05-23 18:20 GMT

ಅಮಾಯಕನ ಮೇಲೆ ಗೂಂಡಾ ಕಾಯ್ದೆ: ಸಹೋದರನ ಆರೋಪ
ಮಂಗಳೂರು, ಮೇ 23: ಗೂಂಡಾ ಕಾಯ್ದೆಯಡಿ ಪೊಲೀಸರಿಂದ ಬಂಧಿತನಾಗಿರುವ ಕಾವೂರು ಶಾಂತಿನಗರದ ನಿವಾಸಿ ಇಕ್ಬಾಲ್ ಅಮಾಯಕನಾಗಿದ್ದು, ಆತನ ಮೇಲಿನ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯ ಒದಗಿಸಬೇಕೆಂದು ಇಕ್ಬಾಲ್‌ನ ಸಹೋದರ ಕುಂಞಿ ಅಹ್ಮದ್ ಆಗ್ರಹಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕೂಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲು ಇಕ್ಬಾಲ್ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದು, ಆತ ಯಾವ ಸಂಚಿನಲ್ಲೂ ಇಕ್ಬಾಲ್ ಭಾಗಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಇಕ್ಬಾಲ್ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಸಿಸಿಬಿ ಪೊಲೀಸರು ಆತ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಸಿಸಿಬಿ ಪೊಲೀಸರು ನಡೆಸಿರುವ ಹಲ್ಲೆ ವಿರುದ್ಧ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ದೂರು ನೀಡಲಾಗಿತ್ತು. ಇದೇ ನೆಪದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ಅಹ್ಮದ್ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಕ್ಬಾಲ್‌ನ ಪತ್ನಿ ಫಾತಿಮಾ ರೊಹರಾ, ಬಾವ ಮುಹಮ್ಮದ್ ಉಪಸ್ಥಿತರಿದ್ದರು.

ಮರಬಿದ್ದು ಗಾಯ: ಪರಿಹಾರಕ್ಕೆ ಮನವಿ
ಉಡುಪಿ, ಮೇ 23: ಕೆಲವು ದಿನಗಳ ಹಿಂದೆ ಸುರಿದ ಮಳೆಗಾಳಿಯಿಂದಾಗಿ ತೆಂಗಿನ ಮರ ಮೈಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ನ್ಯಾಯವಾದಿ ಬ್ರಹ್ಮಾವರ ಸಾಲಿಕೇರಿಯ ಕಾಸನಹಿತ್ಲುವಿನ ಜೆರಾಲ್ಡ್ ಲೂವಿಸ್‌ರ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸುವಂತೆ ಹಾಗೂ ಸೂಕ್ತ ಪರಿಹಾರ ನೀಡುವಂತೆ ಉಡುಪಿ ವಕೀಲರ ಸಂಘವು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ.


ಮೇ 16ರಂದು ರಾತ್ರಿ ಬ್ರಹ್ಮಾವರದ ತನ್ನ ಕಚೇರಿಯಿಂದ ಮನೆಗೆ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಉಡುಪಿ ತಹಶೀಲ್ದಾರ್ ಭೇಟಿ ನೀಡಿದ್ದಾರೆ. ಈ ಅವಘಡದಿಂದ ಜೆರಾಲ್ಡ್‌ರ ಬೆನ್ನು ಮೂಳೆಗೆ ತೀವ್ರ ಹಾನಿಯಾಗಿದೆ. ದೇಹದ ಬಹುತೇಕ ಭಾಗಗಳು ಜಖಂಗೊಂಡಿವೆ. ಇದೀಗ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡ ಕುಟುಂಬದ ನ್ಯಾಯವಾದಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಾಧ್ಯವಾಗಿದೆ. ಆದುದರಿಂದ ವಿಶೇಷ ಗಮನ ಹರಿಸಿ ಇವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು. ಪ್ರಕೃತಿ ವಿಕೋಪದಡಿ 25ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಸಂಘ ಆಗ್ರಹಿಸಿದೆ.

ಮದ್ಯ ಸೇವಿಸಿ ಮೃತ್ಯು
  ಉಡುಪಿ, ಮೇ 23: ಬಾಗಲಕೋಟೆಯ ಮಲ್ಲಿಕಾರ್ಜುನ ಗುಂಡಗಾಜಿ (30) ಎಂಬವರು ವಿಪರೀತ ಮದ್ಯ ಕುಡಿದು ಮೇ 22ರಂದು ಮಧ್ಯಾಹ್ನ ವೇಳೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ: 9 ಮಂದಿ ಬಂಧನ
ಉಡುಪಿ, ಮೇ 23: ಚಿಟ್ಪಾಡಿ ಗೋಕುಲ್‌ದಾಸ್ ಕಾಂಪೌಂಡು ಬಳಿ ಮೇ 22ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪಿಟು ಜುಗಾರಿ ಆಡುತ್ತಿದ್ದ 9 ಮಂದಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗದಗ ಜಿಲ್ಲೆಯ ಬಸವರಾಜ (22), ಜಗದೀಶ ವೀರಪ್ಪ ಗಾಣಿಗೇರ (26), ಬಾಗಲಕೋಟೆಯ ಕುಮಾರ (19), ಶರಣಪ್ಪ ದ್ಯಾಮಪ್ಪ ಕೊಂತ (25), ಸಿದ್ದು ಶರಣಪ್ಪ ಮೂಲಿಮನಿ(24), ಅರ್ಜುನ ವಸಂತ ಗಾಡಿ ವಡ್ಡರ (28), ಕೊಪ್ಪಳದ ಮಂಜುನಾಥ ರಾಠೋಡ (20), ಬಾದಾಮಿಯ ಹನುಮಂತ ಕಾಗಲಗೊಂಬೆ(23), ಹಾವೇರಿಯ ಮಲ್ಲೇಶ (31) ಎಂದು ಗುರುತಿಸಲಾಗಿದೆ. ಇವರಿಂದ ಒಟ್ಟು 10,300ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ಯಾಚಾರಕ್ಕೆ ಯತ್ನ: ಹೊಟೇಲ್ ಮಾಲಕನ ಬಂಧನ
ಮೂಡುಬಿದಿರೆ, ಮೇ 23: ತಿಂಡಿ ಪಾರ್ಸೆಲ್ ಕೊಂಡು ಹೋಗಲು ಹೊಟೇಲ್‌ಗೆ ಬಂದಿದ್ದ ಯುವತಿಯ ಮಾನಭಂಗಕ್ಕೆತ್ನಿಸಿದ ಘಟನೆಗೆ ಸಂಬಂಧಿಸಿ ಆರೋಪಿ ಬೆಳುವಾಯಿಯ ಹೊಟೇಲ್ ಮಾಲಕನನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬೆಳುವಾಯಿಯ ಬಾಡಿಗೆ ಮನೆಯಲ್ಲಿ ಕಡೂರಿನ ಕುಟುಂಬವೊಂದು ವಾಸವಿದ್ದು, ಇಲ್ಲಿನ ಹುಡುಗಿ ಶನಿವಾರ ಬೆಳಗ್ಗೆ ತನ್ನ ಮನೆ ಹತ್ತಿರದ ಬಿಸ್ಮಿಲ್ಲಾ ಹೊಟೇಲ್‌ಗೆ ತಿಂಡಿ ಪಾರ್ಸೆಲ್ ತರಲು ತೆರಳಿದ್ದಳು. ಹೊಟೇಲ್ ಮಾಲಕ ಶಾಕೀರ್ ಹುಡುಗಿಯ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ವಿಷಯವನ್ನು ಹುಡುಗಿ ತನ್ನ ತಂದೆ ರವಿವಾರ ಮನೆಗೆ ಬಂದಾಗ ತಿಳಿಸಿದ್ದಾಳೆ. ಆ ದಿನ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜಾನುವಾರು ಕಳವು
ಕಾಸರಗೋಡು, ಮೇ 23: ಬದಿಯಡ್ಕ ಸಮೀಪದ ಬೇಳದ ಅಬ್ದುಲ್ಲಾ ಎಂಬವರ ಹಟ್ಟಿಯಿಂದ ಜಾನುವಾರುಗಳನ್ನು ಕಳವುಗೈದ ಬಗ್ಗೆ ವರದಿಯಾಗಿದೆ.ಮನೆಯ ಆವರಣ ಗೋಡೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಕಳವಾದ ಜಾನುವಾರುಗಳ ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಂಜಾ ಸಾಗಾಟ: ಮೂವರ ಸೆರೆ
ಕಾಸರಗೋಡು, ಮೇ 23: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಗಾಂಜಾವನ್ನು ಹೊಸದುರ್ಗ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
 ಬಂಧಿತರನ್ನು ಪದನ್ನಕಾಡ್‌ನ ಮೊಯ್ದಿನ್ (33), ಅಂಬಲತ್ತರದ ಉಬೈದ್ (48), ಟಿ. ಶಫೀಕ್ (33) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 11 ಕಿಲೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಡಿಕ್ಕಿಯಲ್ಲಿ ನಾಲ್ಕು ಪ್ಯಾಕೆಟ್‌ಗಳಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ಹೊಸದುರ್ಗ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ರಾಷ್ಟ್ರೀಯ ಹೆದ್ದಾರಿಯ ಮಾವುಂಗಾಲ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಗಾಂಜಾ ಸಾಗಾಟ ಪತ್ತೆಯಾಗಿದೆ. ಕಾರು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲೆತ್ನಿಸಿದರೂ ಬೆನ್ನಟ್ಟಿದ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾದರು. ಗಲ್ಫ್ಗೆ ಕೊಂಡೊಯ್ಯಲು ಇದನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವಕ ನಾಪತ್ತೆ
ಮಲ್ಪೆ, ಮೇ 23: ಕೆಳಾರ್ಕಳಬೆಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಶಿರಸಿ ಮೂಲದ ರಾಘವೇಂದ್ರ(27) ಎಂಬವರು ಮೇ 21ರಂದು ಬ್ರಹ್ಮಾವರದ ಹೊಯ್ಗೆ ಧಕ್ಕೆಯಲ್ಲಿ ಕೆಲಸಕ್ಕೆ ಹೋದವರು ಈವರೆಗೆ ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: ಇಬ್ಬರಿಗೆ ತಂಡದಿಂದ ಹಲ್ಲೆ
ಬೆಳ್ತಂಗಡಿ, ಮೇ 23: ದ್ವಿಚಕ್ರ ವಾಹನಗಳು ಢಿಕ್ಕಿಯಾದ ವಿಚಾರದಲ್ಲಿ ಮಾತುಕತೆ ನಡೆಯುತ್ತಿದ್ದ ವೇಳೆ ತಂಡವೊಂದು ಇಬ್ಬರಿಗೆ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ.ತೆಂಕಕಾರಂದೂರಿನ ಅಶೋಕ್ ಆಚಾರ್ಯ (38) ಹಾಗೂ ಚಂದ್ರಹಾಸದಾಸ್(40) ಹಲ್ಲೆಗೊಳಗಾದವರು. ಅಶೋಕ್ ಗುರುವಾಯನಕೆರೆಯಿಂದ ತನ್ನ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಶಕ್ತಿನಗರ ಎಂಬಲ್ಲಿ ಎದುರಿನಿಂದ ಸುಲೈಮಾನ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಢಿಕ್ಕಿಯಾಗಿದೆ. ಈ ಬಗ್ಗೆ ಇಬ್ಬರ ಮಧ್ಯೆ ಮಾತುಕತೆ ನಡೆಯುತ್ತಿತ್ತು. ಇದೇ ವೇಳೆ ಅಲ್ಲಿಗೆ ಅಬ್ದುರ್ರಝಾಕ್ ಮತ್ತಿತರರು ಸ್ಥಳಕ್ಕೆ ಬಂದು ಅಶೋಕ್‌ರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದರು. ಈ ರಸ್ತೆಯಲ್ಲಿ ಹೋಗುತ್ತಿದ್ದ ಚಂದ್ರಹಾಸ ಗಲಾಟೆಯನ್ನು ಗಮನಿಸಿ ತಡೆಯಲು ಬಂದಾಗ ಅಬ್ದುರ್ರಝಾಕ್, ನಝೀರ್, ಹಸೈನಾರ್, ರಝಾಕ್ ಮತ್ತು 20 ಮಂದಿಯ ತಂಡ ಅಶೋಕ್ ಮತ್ತು ಚಂದ್ರಹಾಸರಿಗೆ ಹೆಲ್ಮೆಟ್ ಹಾಗೂ ಕೈಯಿಂದ ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಗಾಯಗೊಂಡ ಅಶೋಕ್ ಹಾಗೂ ಚಂದ್ರಹಾಸರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News