ತುಂಬೆಯಲ್ಲಿ ನೀರಿನ ಮಟ್ಟ ಏರಿಕೆ: ಇಂದಿನಿಂದ ನಗರಕ್ಕೆ ಪ್ರತಿದಿನ ನೀರು ಪೂರೈಕೆ

Update: 2016-05-24 07:50 GMT

ಮಂಗಳೂರು, ಮೇ 24: ಕಳೆದ ಸುಮಾರು ಒಂದ ತಿಂಗಳಿನಿಂದ ನಗರದಲ್ಲಿ ಬಿಗಡಾಯಿಸಿದ್ದ ಕುಡಿಯುವ ನೀರಿನ ಸಮಸ್ಯೆಗೆ ಕಳೆದ ಕೆಲವು ದಿನಗಳಿಂದ ಸುರಿದ ಮಳೆ ಕೊಂಚ ರಿಲ್ಯಾಕ್ಸ್ ನೀಡಿದೆ. ಮಳೆಯಿಂದಾಗಿ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 7 ಅಡಿಗಳಿಗೆ ಏರಿಕೆಯಾಗಿದ್ದು, ಇಂದಿನಿಂದ ಮಂಗಳೂರು ಮಹಾನಗರ ಪಾಲಿಕೆಯಿಂದ ನಗರಕ್ಕೆ ಪ್ರತಿದಿನ ನೀರು ಪೂರೈಕೆಯಾಗಲಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ತುಂಬೆ ಅಣೆಕಟ್ಟಿನಲ್ಲಿ ಮುಂದೆ ನೀರು ಇಳಿಕೆಯಾದಲ್ಲಿ ಮತ್ತೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯ ಕ್ರಮವನ್ನು ಮುಂದುವರಿಸಲಾಗುವುದು. ಅಲ್ಲಿಯವರೆಗೆ ಪ್ರತಿನಿತ್ಯ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಳೆದ ವರ್ಷ ಮಳೆಯ ಪ್ರಮಾಣ ಶೇ. 21ರಷ್ಟು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಈ ವರ್ಷ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಹಾಗಿದ್ದರೂ ನಗರ ಸೇರಿದಂತೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯನ್ನು ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಿಸಲು ಪ್ರಯತ್ನಿಸಿದೆ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ಕೈಗಾರಿಕೆಗಳಿಗೆ ಉಪ್ಪು ನೀರಿನ ಬಳಕೆ: ಮೇ 25ರಂದು ಪ್ರಾಥಮಿಕ ಸಭೆ

ನಗರದ ಬೃಹತ್ ಕೈಗಾರಿಕೆಗಳಿಗೆ ಪ್ರಸ್ತುತ ನೇತ್ರಾವತಿ ನೀರು ಹಾಗೂ ಒಳಚರಂಡಿಯ ಸಂಸ್ಕರಿಸಿದ ನೀರನ್ನು ಉಪಯೋಗಿಸಲಾಗುತ್ತಿದೆ. ಇದೀಗ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಬಳಸುವ ಬಗ್ಗೆ ನಗರದ ವಿವಿಧ ಕೈಗಾರಿಗಳ ಮುಖ್ಯಸ್ಥರ ಜತೆ ಪ್ರಾಥಮಿಕ ಸಭೆಯನ್ನು ಮೇ 25ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

ಎಂಆರ್‌ಪಿಎಲ್, ಎಸ್‌ಇಝೆಡ್, ಎಂಸಿಎಫ್ ಸೇರಿದಂತೆ ವಿವಿಧ ಕೈಗಾರಿಕೆಗಳ ಮುಖ್ಯಸ್ಥರು ಬೆಳಗ್ಗೆ 10:30ಕ್ಕೆ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದು, ಉಪ್ಪು ನೀರನ್ನು ಸಂಸ್ಕರಿಸಿ ಬಳಸುವ ಕುರಿತು ಚರ್ಚಿಸಲಾಗುವುದು. ಈಗಾಗಲೇ ಈ ಕೈಗಾರಿಕೆಗಳು ಮನಪಾದಿಂದ ಪಡೆಯುವ 1000 ಲೀಟರ್ ನೀರಿಗೆ 50 ರೂ.ನಂತೆ ಶುಲ್ಕವನ್ನು ಪಾವತಿಸುತ್ತಿವೆ. ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿದಾಗ 1000 ಲೀಟರ್‌ಗೆ 80 ರೂ.ನಷ್ಟು ಖರ್ಚು ಬೀಳಲಿದೆ. ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ನೇತ್ರಾವತಿ ನದಿ ನೀರನ್ನು ಅವಲಂಬಿಸುವುದನ್ನು ತಪ್ಪಿಸಿ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News