×
Ad

ಇನ್ನು ಬೃಹತ್ ವಸತಿ, ಕೈಗಾರಿಕೆ, ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ!

Update: 2016-05-24 13:37 IST

ಮಂಗಳೂರು, ಮೇ 24: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಹಾಗೂ ಮಳೆ ನೀರು ಮರು ಪೂರಣಕ್ಕೆ ಒತ್ತು ನೀಡಲು ಮುಂದಾಗಿರುv ಜಿಲ್ಲಾಡಳಿತ, ಜಿಲ್ಲೆಯಾದ್ಯಂತ ಬೃಹತ್ ವಸತಿ, ಕೈಗಾರಿಕೆ ಸೇರಿದಂತೆ ಎಲ್ಲಾ ಕಟ್ಟಡಗಳಲ್ಲೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ ಆದೇಶಿಸಿದೆ.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಈ ಬಗ್ಗೆ ಲಿಖಿತ ಆದೇಶವನ್ನು ಪ್ರಕಟಿಸಿದ್ದು, ವಾಣಿಜ್ಯ ಉಪಯೋಗದ ಕಟ್ಟಡಗಳು, ಎಲ್ಲಾ ರೀತಿಯ ಕೈಗಾರಿಕಾ ಕಟ್ಟಡಗಳು, 2000 ಚದರ ಅಡಿಗಿಂತ ಅಧಿಕ ವಿಸ್ತೀರ್ಣ ಹೊಂದಿರುವ ವಸತಿ ಸಹಿತ ಎಲ್ಲಾ ತರಹದ ಕಟ್ಟಡಗಳಲ್ಲಿ ಕಡ್ಡಾಯವಾಗಿ ತಾಂತ್ರಿಕವಾಗಿ ಮಳೆ ನೀರು ಕೊಯ್ಲು ಮಾಡತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಮತ್ತು ವೈಯಕ್ತಿಕ ಕೊಳವೆ ಬಾವಿಗಳಿಗೆ ತಾಂತ್ರಿಕವಾಗಿ ಅಂತರ್ ಜಲ ಕೃತಕ ಮರುಪೂರಣ ವ್ಯವಸ್ಥೆ ಮಾಡತಕ್ಕದ್ದು ಹಾಗೂ ಬಯಲು ಪ್ರದೇಶದಲ್ಲಿ ವಿಸ್ತೀರ್ಣಕ್ಕೆ ಪೂರಕವಾಗಿ ಇಂಗು ಗುಂಡಿಗಳನು ನಿರ್ಮಿಸಬೇಕು ಮತ್ತು ಕಡ್ಡಾಯವಾಗಿ ಕಟ್ಟಡಗಳ ಪರವಾನಿಗೆ ನೀಡುವಾಗ ಸಂಬಂಧಪಟ್ಟ ಅಧಿಕಾರಿಗಳು ಈ ಷರತ್ತುಗಳನ್ನು ವಿಧಿಸಿ ಕಾರ್ಯರೂಪಕ್ಕೆ ಬಂದಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆಯೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಯಂತೆ ಮಳೆ ಬೀಳದೆ ಇರುವುದರಿಂದ ಮತ್ತು ವಿಪರೀತ ತಾಪಮಾನದಿಂದ ಅಂತರ್ ಜಲ ಮಟ್ಟ ಕುಸಿದಿದೆ. ಬಾವಿಗಳು ಮತ್ತು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳು, ಸಾರ್ವಜನಿಕ ಕುಡಿಯುವ ನೀರಿನ ಉದ್ದೇಶಕ್ಕೆ ಹೊರತು ಪಡಿಸಿ ಬೇರೆ ಉದ್ದೇಶಗಳಿಗೆ ಕೊಳವೆ ಬಾವಿಗಳನ್ನ ಕೊರೆಯುವುದನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮೇ 31ರವರೆಗೆ ನಿಷೇಧಿಸಿದೆ.

ದ.ಕ. ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 4,000 ಮಿ.ಮೀ. ಮಳೆಯಾಗುತ್ತಿದ್ದರೂ ಸಹ ಮಣ್ಣಿನ ಗುಣಾಂಶವು ಭೂಮಿ ಮೇಲ್ಮೈಯಲ್ಲಿ ಹಾಗೂ ಅದರ ತಳಭಾಗದಲ್ಲಿ ನೀರು ಹರಿವಿಕೆಯು ಅತಿಯಾಗಿರುವುದರಿಂದ ಬೇಸಿಗೆಯಲ್ಲಿ ನೀರಿನ ಅಂತರ್ಜಲ ಕುಸಿತ ತೀವ್ರವಾಗಿ ಕಾಡುತ್ತಿದೆ. 2015ರ ಎಪ್ರಿಲ್‌ ನಲ್ಲಿ ದ.ಕ. ಜಿಲ್ಲೆಯಲ್ಲಿ ಭೂಮಿಯ ಜಲಮಟ್ಟ 12.66 ಮೀಟರ್ ಇದ್ದು, 2016ರ ಎಪ್ರಿಲ್‌ಗೆ 12.37 ಮೀಟರ್‌ಗೆ ಕುಸಿದಿದೆ. ಜಿಲ್ಲೆಯ ಭೂ ಮೇಲ್ಮೈ ಅತಿಯಾಗಿ ನೀರನ್ನು ಹೀರಿಕೊಳ್ಳುವ ಗುಣಲಕ್ಷಣವನ್ನು ಹೊಂದಿದೆ. ಇಲ್ಲಿ ಮುಂಗಾರಿನಲ್ಲಿ ಹೆಚ್ಚಿನ ನೀರಿನ ಲಭ್ಯತೆ ಇದ್ದು, ಸೆಪ್ಟಂಬರ್ ಡಿಸೆಂಬರ್‌ನಲ್ಲಿ ಮಳೆ ನೀರಿನ ಕೊಯ್ಲು, ಅಂತರ್ ಜಲ ಕೃತಕ ಮರುಪೂರಣ ಮತ್ತು ಇಂಗು ಗುಂಡಿಗಳನ್ನು ನಿರ್ಮಿಸುವ ಕ್ರಮಗಲನ್ನು ಕಟ್ಟಡಗಳು, ಕೊಳವೆಬಾವಿ, ಬಯಲು ಪ್ರದೇಶಗಳಲ್ಲಿ ತಾಂತ್ರಿಕವಾಗಿ ನಿರ್ಮಿಸುವುದರಿಂದ ಭೂಮಿಯ ಜಲಮಟ್ಟವ್ನನು ವೃದ್ಧಿಸಬಹುದು ಎಂದು ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ವಿವರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News