ಪಶ್ಚಿಮ ವಾಹಿನಿ ಕುರಿತು ಮುಖ್ಯಮಂತ್ರಿ ಜತೆ ಸಭೆ: ಸಚಿವ ರೈ
ಮಂಗಳೂರು, ಮೇ 24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪಶ್ಚಿಮ ವಾಹಿನಿ ಯೋಜನೆ ಜಾರಿಗೊಳ್ಳುವುದು ಅಗತ್ಯವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಅತಿ ಶೀಘ್ರದಲ್ಲೇ ಸಭೆ ನಡೆಸಿ ಚರ್ಚಿಸುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನ ಮೂರು ವರ್ಷಗಳ ಸಾಧನೆಯ ಕುರಿತಾದ ‘ನುಡಿದಂತೆ ನಡೆಯುತ್ತಿದ್ದೇವೆ- ನಾಲ್ಕನೆ ವರ್ಷದೆಡೆಗೆ ಭರವಸೆಯ ನಡಿಗೆ’ ಎಂಬ ಕಿರು ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗಲಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನೇತ್ರಾವತಿ ಸೇರಿದಂತೆ ಜಿಲ್ಲೆಯ ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವ ಪಶ್ಚಿಮ ವಾಹಿನಿ ಯೋಜನೆಗೆ 1000 ಕೋಟಿ ರೂ. ಅನುದಾನಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳ ಕುರಿತು ವಿವರ ನೀಡಿದ ಸಚಿವ ರೈ, ಜಿಲ್ಲೆಯಲ್ಲಿ ಹೊಸತಾಗಿ 14026 ಬಿಪಿಎಲ್ ಹಾಗೂ 665 ಎಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದರು.
ಆರ್‌ಟಿಇಯಡಿ ಪ್ರವೇಶ ಪಡೆದ 1802 ಶಾಲಾ ಮಕ್ಕಳ ಶುಲ್ಕ ಮರು ಪಾವತಿಗಾಗಿ 2.59 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2012 ಅಂಗವಾಡಿಗಳ 114069 ಮಕ್ಕಳಿಗೆ ಕ್ಷೀರಭಾಗ್ಯದಡಿ ಹಾಲು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಸಲುವಾಗಿ 4820 ವಿದ್ಯಾರ್ಥಿನಿಯರಿಗೆ 22.53 ಲಕ್ಷ ರೂ. ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. ವೆನ್‌ಲಾಕ್‌ನಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆಗೆ ಅನುಮೋದನೆ ದೊರಕಿದ್ದು, 2015-16ನೆ ಸಾಲಿನಲ್ಲಿ ಸಹಾಯಧನದ ಮೂಲಕ 884.9 ಕ್ವಿಂಟಾಲ ಬಿತ್ತನೆ ಬೀಜ ಹಾಗೂ 3142 ಟನ್ ರಸಗೊಬ್ಬರ ವಿತರಿಸಲಾಗಿದೆ.
ಕುಡಿಯುವ ನೀರಿಗೆ ಸಂಬಂಧಿಸಿ ಗ್ರಾಮಾಂತರ ಪ್ರದೇಶಗಳಿಗೆ 5.60 ಕೋಟಿ ರೂ. ಹಾಗೂ ನಗರ, ಪಟ್ಟಣ ಪ್ರದರೇಶಗಳಿಗೆ 3.40 ಕೋಟಿ ರೂ., ಕಂದಾಯ ಇಲಾಖೆಗೆ 98 ಲಕ್ಷ ರೂ. ಮಾರ್ಚ್‌ವರೆಗೆ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1052 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಪ್ರಾಕೃತಿಕ ವಿಕೋಪದಡಿ 2016ರ ಮಾರ್ಚ್ ಅಂತ್ಯದವರೆಗೆ 295.43 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕಂದಾಯ ಅದಾಲತ್ ನಡೆಸಿ 31951 ಅರ್ಜಿಗಳನ್ನು ಸ್ವೀಕರಿಸಿ 31285 ಅರ್ಜಿಗಳನ್ನು ವಿಲೇ ಮಾಡಲಾಗಿದೆ. 94 ಸಿ ಯೋಜನೆಯಡಿ 7486 ಪ್ರಕರಣಗಳಿಗೆ ಮಂಜೂರಾತಿ ನೀಡಲಾಗಿದೆ. ಪೋಡಿಮುಕ್ತ ಅಭಿಯಾನದಡಿ 43 ಗ್ರಾಮಗಳ ಅಳತೆ ಪೂರ್ಣವಾಗಿದೆ. ಸಾಲ ಮನ್ನಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ 21283 ಫಲಾನುಭವಿಗಳಿಗೆ 30.49 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ 121 ಪರಿಶಿಷ್ಟ ವರ್ಗದ ಜನರಿಗೆ 130.49 ಎಕರೆ ವಿಸ್ತೀರ್ಣದ ಭೂಮಿಯ ಹಕ್ಕುಪತ್ರ ನೀಡಲಾಗಿದೆ ಎಂದು ಅವರು ಕೈಗೆತ್ತಿಕೊಳ್ಳಲಾಗಿರುವ ಇತರ ಹಲವಾರು ಯೋಜನೆಗಳ ಮಾಹಿತಿ ನೀಡಿದರು.
ಈ ಸಂದರ್ಭ ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ
ಮಂಗಳೂರಿನ ಉರ್ವಾಸ್ಟೋರ್‌ನಲ್ಲಿ ನಿರ್ಮಿಸಲುದ್ದೇಶಿಸಿರುವ ದ.ಕ. ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನಕ್ಕೆ ರಾಜ್ಯ ಸಂಚಿವ ಸಂಪುಟ ಮೇ 23ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಭವನ, ಜಾಗದ ಸಮಸ್ಯೆಯಿಂದಾಗಿ ನೆನೆಗುದಿಗೆ ಬಿದ್ದಿತ್ತು. ಇದೀಗ ಆಡಳಿತಾತ್ಮಕ ಅನುಮೋದನೆಯ ಹಿನ್ನೆಲೆಯಲ್ಲಿ ಕೆಲವು ದಿನಗಳಲ್ಲೇ ಟೆಡರ್ ಕರೆದು ಕಾಮಗಾರಿ ಆರಂಭಗೊಳ್ಳಲಿದೆ ಎಂದರು ಹೇಳಿದರು.
ರಾಜ್ಯ ಸರಕಾರದ ಅನುದಾನದಲ್ಲೇ ರಂಗ ಮಂದಿರ ನಿರ್ಮಾಣ
ಜಿಲ್ಲೆಯ ಬಹು ನಿರೀಕ್ಷೆಯ ರಂಗ ಮಂದಿರ ನಿರ್ಮಾಣವನ್ನು ರಾಜ್ಯ ಸರಕಾರ ಸ್ವಂತ ಅನುದಾನದಲ್ಲೇ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಈವರೆಗೆ ಕೇಂದ್ರ ಸರಕಾರದ ಠಾಗೋರ್ ಫೌಂಡೇಶನ್‌ನಿಂದ ಅನುದಾನಕ್ಕಾಗಿ ಎದುರು ನೋಡಲಾಗುತ್ತಿತ್ತು. ಇದೀಗ ರಾಜ್ಯ ಸರಕಾರ ಸ್ವಂತ ಅನುದಾನದಲ್ಲ ರಂಗ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ ಎಂದರು.