×
Ad

ಮುಲ್ಕಿಯ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಅಭಯಚಂದ್ರ ಜೈನ್

Update: 2016-05-24 15:09 IST

ಮುಲ್ಕಿ, ಮೇ 24; ಇಲ್ಲಿನ ರಾ. ಹೆದ್ದಾರಿ ಅಗಲೀಕರಣದ ವೇಳೆ ತೆರವು ಗೊಳಿಸಿದ್ದ ಬಸ್ ನಿಲ್ದಾಣ ಸೇರಿದಂತೆ ಮುಲ್ಕಿಯ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಮಂಗಳವಾರ ಮುಲ್ಕಿ ನಗರ ಪಂಚಾಯತ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಗರ ಪಂಚಾಯತ್‌ನ ವತಿಯಿಂದ ಮುಲ್ಕಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಸಲ್ಲಿಸಲಾದ ಮನವಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಬಗ್ಗೆ ಈಗಾಗಲೇ ಮನವರಿಕೆಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಿಳಿಸಲಾಗಿತ್ತು. ಅಲ್ಲದೆ, ನಿವೇಶನ ಖರೀದಿಗೆ 3 ಕೋಟಿ ರೂ. ವೆಚ್ಚದ ಪ್ರಸ್ತಾವಣೆಗೆ ಆದೇಶ ಪತ್ರ ನಗರ ಪಂಚಾಯತ್ ಬಂದಿದೆ. ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಹೆದ್ದಾರಿ ಅಗಲೀಕರಣದ ವೇಳೆ ಹೆದ್ದಾರಿಯ ಪಕ್ಕದಲ್ಲಿರುವ ಚರಂಡಿಗಳು ಮುಚ್ಚಿಹೋಗಿದೆ. ಜನತೆ ಮನೆ ಜಮೀನುಗಳಿಗೆ ನೀರು ತುಂಬುವ ಬಗ್ಗೆ ಪತ್ರಕೆಗಳು ಆರೋಪ ಮಾಡಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಇಂಜಿನಿಯರ್ ಅವರನ್ನು ಕರೆಸಿ ಸಂಪೂರ್ಣ ಮಾಹಿತಿ ಪಡೆದು ಕೊಂಡು ಶೀಘ್ರವಾಗಿ ಒಳ ಚರಂಡಿ ವ್ಯವಸ್ಥೆ ಕಲಿಸಲಾಗುವುದು ಎಂದು ಭರವಸೆ ನೀಡಿದರು.

 ಮುಲ್ಕಿಯಲ್ಲಿ ಉತ್ತಮ ನಿವೇಶ ದೊರೆತಲ್ಲಿ ಸ್ವಿಮ್ಮಿಂಗ್ ಪೂಲ್, ಉತ್ತಮ ಗುಣ ಮಟ್ಟದ ಫೆವಿಲಿಯನ್, ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಮುಲ್ಕಿ ಹಾಗೂ ಸಸಿಹಿತ್ಲು ಪ್ರದೇಶಗಳನ್ನು ಸರ್ಫಿಂಗ್ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತರುವಂತೆ ಮಾಡಲಾಗುತ್ತಿದೆ. ಎಂದರು.

ಜನತೆಯ ಬಹುದಿನಗಳ ಆಕಾಂಕ್ಷೆಯಂತೆ ಮುಲ್ಕಿಯಲ್ಲಿ ವಿದ್ಯುತ್ ಕೇಂದ್ರ ಸ್ಥಾಪಿಸಲಾಗುವುದ ಎಂದ ಸಚಿವರು, ಪಂಜ, ಚೇಳಾಯರು, ಹಳೆಯಂಗಡಿ ಸಮೀಪದ ನಿವಾಸಿಗಳಿಗೆ ಸಹಕಾರಿಯಾಗುವಂತೆ ಹಳೆಯಂಗಡಿಯಲ್ಲಿ ಉಪಕೇಂದ್ರ ನಿರ್ಮಿಸಲಾಗುವುದು. ಆ ಬಗ್ಗೆ ಸರಕರದ ಆದೇಶ ಸಿಕ್ಕಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 17 ಕೆರೆಗಳಿದ್ದು, ಅವುಗಳಲ್ಲಿ ಹೂಳು ತುಂಬಿಕೊಂಡಿದೆ. ಎಲ್ಲಾ ಕೆರೆಗಳ ಹೂಳೆತ್ತಿ, ಅಭಿವೃದ್ಧಿ ಪಡಿಸಿದಲ್ಲಿ ಮುಲ್ಕಿಯಲ್ಲಿ ಉಂಟಾಗುತ್ತಿರುವ ನೀರಿನ ಬವಣೆಯನ್ನು ನೀಗಿಸಬಹುದು ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಳ್ ಆಳ್ವ ಸಭೆಯಲ್ಲಿ ಸಚಿವರ ಗಮನ ಸೆಳೆದರು. ಈ ಬಗ್ಗೆ ಉತ್ತರಿಸಿದ ಸಚಿವರು, ಈಗಲೇ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿ ಸಭೆಯ ಬಳಿಕ ಸ್ಥಳ ಪರಿಶೀಲನೆ ನಡೆಸಿದರು.

ಪ್ರಸ್ತುತ ಮುಲ್ಕಿಯಲ್ಲಿ ಪ್ರಭಾರ ತಹಶೀಲ್ದಾರ್ ಕಾರ್ಯನಿರ್ವಹಿಸುತ್ತಿದ್ದು, ಜೂನ್ ಅಂತ್ಯದ ಒಳಗಾಗಿ ಮುಲ್ಕಿಯಲ್ಲಿ ಶಾಶ್ವತ ತಹಶೀಲ್ದಾರ್ ನೇಮಕ ಮಾಡಲಾಗುವುದು. ಈ ಮೂಲಕ ಸಾರ್ವಜನಿಕರು ಸರಕಾರದ ವ್ಯವಸ್ಥೆಗಳನ್ನು ಉತ್ತಮ ರೀತಿಯಲ್ಲಿ ಪಡೆಯಲು ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಉಪಾಧ್ಯಕ್ಷೆ ವಸಂತಿ, ಸ್ಥಾಯೀ ಸಮಿಯ ಅಧ್ಯಕ್ಷ ಸುನಿಲ್ ಆಳ್ವ, ಮುಖ್ಯಾಧಿಕಾರಿ ವಾಣಿ ವಿ.ಆಳ್ವ, ಮಾಜೀ ಅಧ್ಯಕ್ಷ ಆಸೀಫ್ ಕೊಲ್ನಾಡ್ ಮೊದಲಾದವರು ಉಪಸ್ಥಿತರಿದ್ದರು.

ಹಳೆಯಂಗಡಿ ರೈಲು ಸೇತುವೆ ಬಗ್ಗೆ ಈಗಾಗಲೇ ಪ್ರಸ್ತಾವಣೆ ಸಲ್ಲಿಸಿ, ಸಚಿವರು ಹಾಗೂ ಸಂಸದರು ಸ್ಥಳ ಪರಿಶೀಲನೆ ನಡೆಸಿ 6 ತಿಂಗಳು ಕಳೆದರೂ ಸೇತುವೆ ಕಾಮಗಾರಿ ಆರಂಭ ಗೊಳ್ಳದಿರುವ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ಸಚಿವರು, ರೈಲ್ವೇ ಇಲಾಖೆ ಕೇಂದ್ರದ ಅಧೀನದಲ್ಲಿ ಕಾರ್ಯಚರಿಸುತ್ತಿದೆ. ಕೇಂದ್ರ ಈ ಕಾಮಗಾರಿಯ ಬಗ್ಗೆ ಮುಂದಡಿ ಇಟ್ಟಲ್ಲಿ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News