ಐಎಸ್‌ಎ ಪ್ರಶಸ್ತಿಗೆ ಮೌಂಟ್ ಕಾರ್ಮೆಲ್ ಶಾಲೆ ಆಯ್ಕೆ
ಮೂಡುಬಿದಿರೆ, ಮೇ 24: ಐಎಸ್‌ಎ 2016-19 (ಬ್ರಿಟಿಷ್ ಕೌನ್ಸಿಲ್ ಇಂಟರ್‌ನ್ಯಾಶನಲ್ ಸ್ಕೂಲ್ ಅಕ್ಟಿವಿಟಿಸ್) ಪ್ರಶಸ್ತಿಗೆ ಮೂಡುಬಿದಿರೆಯ ಮೌಂಟ್ ಕಾರ್ಮೆಲ್ ಶಾಲೆ ಆಯ್ಕೆಯಾಗಿದೆ.
ಮಕ್ಕಳು ಹಾಗೂ ಯುವಜನರಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಅರಿವು ಹಾಗೂ ಬೋಧನೆ-ಕಲಿಕೆಗಳ ಗುಣಮಟ್ಟವನ್ನು ಹೆಚ್ಚಿಸುವುದು ಈ ಯೋಜನೆ ಉದ್ದೇಶವಾಗಿದೆ. ಪ್ರಶಸ್ತಿಗೆ ಗಳಿಸುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಶಿಕ್ಷಕರಲ್ಲಿ ಬೋಧನ ಸಾಮರ್ಥ್ಯ ಹೆಚ್ಚಿಸಲು ಸಂಸ್ಥೆಯೂ ಶಾಲೆಗೆ ಸಾಥ್ ನೀಡಲಿದೆ. ಐಎಸ್‌ಎ ಲೋಗೋ ಅನ್ನು ಶಾಲಾ ಆಡಳಿತ ವ್ಯವಸ್ಥೆ ಹಾಗೂ ಚಟುವಟಿಕೆ ಬಳಸಬಹುದಾಗಿದೆ.
‘ಐಎಸ್‌ಎ’ ಯೋಜನೆಯ ಪ್ರಶಸ್ತಿ ಅರ್ಹತೆಗೆ ಫೆಬ್ರವರಿ 18ರಂದು ಮೂಡುಬಿದಿರೆ ಕಾರ್ಮೆಲ್ ಸ್ಕೂಲ್(ಸಿಬಿಎಸ್‌ಇ) ಅಂತಾರಾಷ್ಟ್ರೀಯ ವೈವಿದ್ಯತೆಯ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾರ್ಚ್ ತಿಂಗಳಲ್ಲಿ ಪ್ರದರ್ಶನದ ವರದಿಯನ್ನು ಚೆನ್ನೈಯಲ್ಲಿರುವ ಬ್ರಿಟಿಷ್ ಕೌನ್ಸಿಲ್ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಎಲ್‌ಕೆಜಿ, ಯುಕೆಜಿ ಮಕ್ಕಳು ವಿವಿಧ ‘ರಾಷ್ಟ್ರೀಯ ಹೂವು’ಗಳನ್ನು , ಒಂದನೇ ತರಗತಿಯ ಮಕ್ಕಳು ಸಾಕುಪ್ರಾಣಿಗಳ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ, 2ನೇ ತರಗತಿಯ ವಿದ್ಯಾರ್ಥಿಗಳು ‘ಸುಗ್ಗಿ ಹಬ್ಬ’ವನ್ನು ವಿದೇಶಗಳಲ್ಲಿ ಯಾವ ರೀತಿ ಆಚರಿಸುತ್ತಾರೆ ಎಂಬುವುದನ್ನು , ಮೂರನೇ ತರಗತಿಯ ಮಕ್ಕಳು ಮಳೆಗಾಲದಲ್ಲಿನ ವಿಶೇಷತೆಗಳ ಕುರಿತು ಯೋಜನೆಗಳನ್ನು ಪ್ರದರ್ಶಿಸಿದ್ದರು.
ನಾಲ್ಕನೇ ಹಾಗೂ 5ನೇ ತರಗತಿ ಮಕ್ಕಳು ವಿವಿಧ ದೇಶಗಳಲ್ಲಿನ ಸಂಚಾರಿ ನಿಯಮಗಳ ಕುರಿತು ಸೂಚನ ಫಲಕ, ಪರಿಕರಗಳ ಮೂಲಕ ವಿವರಣೆ, 6ನೇ ಹಾಗೂ 7ನೇ ತರಗತಿಯ ಮಕ್ಕಳು ಪೌಷ್ಠಿಕ ಆಹಾರಗಳನ್ನು ತಯಾರಿಕೆ 8ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ದೇಶಗಳ ನೃತ್ಯ ಕಲೆಗಳನ್ನು ಅವುಗಳ ಧಿರಿಸು, ಅಭರಣಗಳೊಂದಿಗೆ ಪ್ರಸ್ತುಪಡಿಸಲಾಗಿತ್ತು.