×
Ad

ಪುತ್ತೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ ಪ್ರಕರಣ: ಸೂಕ್ತ ಮುನ್ನೆಚ್ಚರಿಕೆಗೆ ಸದಸ್ಯರ ಆಗ್ರಹ

Update: 2016-05-24 17:48 IST

ಪುತ್ತೂರು, ಮೇ 24: ಪುತ್ತೂರು ತಾಲೂಕಿನಲ್ಲಿ ಸುಮಾರು 150ಕ್ಕೂ ಅಧಿಕ ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯ ದಾಖಲೆಗಳು ಸರಿಯಾಗಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಕರಣಗಳು ಆರೋಗ್ಯ ಇಲಾಖೆಯ ದಾಖಲೆಗೆ ಸಿಗುತ್ತಿಲ್ಲ. ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಾ.ಪಂ. ಸದಸ್ಯರು ಆಗ್ರಹಿಸಿದರು.

 ಪುತ್ತೂರು ತಾ.ಪಂನ ಪ್ರಥಮ ಸಾಮಾನ್ಯ ಸಭೆಯು ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ಡೆಂಗ್ ಕುರಿತು ಮಾಹಿತಿ ನೀಡುತ್ತಾ ತಾಲೂಕಿನ ಕಡಬದಲ್ಲಿ 2, ಕಾಣಿಯೂರು 3, ಕೊಲ 3, ಪಾಣಾಜೆ 3, ಸರ್ವೆ 1, ಉಪ್ಪಿನಂಗಡಿ 1 ಸೇರಿದಂತೆ ಒಟ್ಟು ಒಟ್ಟು 13 ಪ್ರಕರಣಗಳು ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 102 ಸಂಶಯಾಸ್ಪದ ಜ್ವರ ಪ್ರಕರಣ ಕಂಡುಬಂದಿದೆ. ಇದುವರೆಗೆ 609 ಮನೆಗಳಿಗೆ ಫಾಗಿಂಗ್ ಕಾರ್ಯ ನಡೆಸಲಾಗಿದೆ. ರೋಗ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. 900ಕ್ಕೂ ಅಧಿಕ ಮನೆಗಳಿಗೆ ಡೆಂಘೀ ತಡೆಯುವ ಕುರಿತು ಕರಪತ್ರ ನೀಡಲಾಗಿದೆ. ಸೊಳ್ಳೆ ನಾಶಕ್ಕಾಗಿ ಹಲವು ಡೆಂಗ್ ಶಂಕಿತ ಪ್ರದೇಶಗಳಲ್ಲಿ ಫಾಗಿಂಗ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನು ಆಕ್ಷೇಪಿಸಿದ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಪ್ರತಿ ಗ್ರಾಮದಲ್ಲಿ 5-6 ಡೆಂಗ್ ಪ್ರಕರಣಗಳು ಪತ್ತೆಯಾಗುತ್ತಿದೆ. ಆದರೆ ತಾಲೂಕಲ್ಲಿ ಕೇವಲ 13 ಪ್ರಕರಣ ಪತ್ತೆಯಾಗಿದೆ ಎಂದು ಮಾಹಿತಿ ನೀಡುತ್ತಾರೆ. ಹಾಗಾದರೆ ಉಳಿದ ಜ್ವರ ಪ್ರಕರಣಗಳನ್ನು ಏನೆಂದು ಪರಿಗಣಿಸಿದ್ದೀರಿ? ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಮಾಹಿತಿಯನ್ನೇ ತೆಗೆದುಕೊಳ್ಳುತ್ತಿಲ್ಲ. ರೋಗದ ಸಮಗ್ರ ಮಾಹಿತಿ ಸಂಗ್ರಹಿಸುವುದರೊಂದಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
  
ಅದಕ್ಕೆ ಧ್ವನಿಗೂಡಿಸಿದ ಸದಸ್ಯ ಫಝಲ್ ಕೋಡಿಂಬಾಳ ಮತ್ತು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಇಲಾಖೆ ಡೆಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಡಬ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ಡೆಂಗ್ ಪೀಡಿತರಿದ್ದು, ಬಹುತೇಕ ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದ್ದು, ರಾತ್ರಿ ವೇಳೆ ಕರ್ತವ್ಯ ನಿರ್ವಹಣೆಗೆ ವೈದ್ಯರೇ ಇರುತ್ತಿಲ್ಲ. ಇರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ಹುದ್ದೆ ಖಾಲಿಯಾಗಿದೆ. ತಾಲೂಕು ವೈದ್ಯಾಧಿಕಾರಿ ಇಲ್ಲಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ಡೆಂಗ್ ಬಗ್ಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಳೆಗಾಲ ಹತ್ತಿರದಲ್ಲಿದ್ದು ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಈ ಬಗ್ಗೆ ತಾನು ಸರ್ಕಾರದ ಗಮನಕ್ಕೆ ತಂದು ವೈದ್ಯರ ಮತ್ತು ದಾದಿಯರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳಿದ್ದು ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ ಶಾಸಕಿ ಅವರು ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಚರ್ಚೆಗೆ ಗ್ರಾಸವಾದ ಎಸೆಸೆಲ್ಸಿ ಫಲಿತಾಂಶ


ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಾಧಾಕೃಷ್ಣ ಬೋರ್ಕರ್, ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಮಿಶನ್ 95+ ಯಶಸ್ಸಿಗೆ ಕ್ಷೇತ್ರ ಶಿಕ್ಷಣಾಧಿಕಾಧಿಕಾರಿ ಮತ್ತು ತಂಡ ಸಾಕಷ್ಟು ಶ್ರಮ ವಹಿಸಿದ್ದರೂ ಯಾಕೆ ಫಲಿತಾಂಶ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣ ಇಲಾಖೆಗೆ 1,007 ಹುದ್ದೆ ಮಂಜೂರಾಗಿದ್ದು, ಇನ್ನೂ 227 ಹುದ್ದೆ ಖಾಲಿಯಾಗಿದೆ. 6 ಶಾಲೆಗಳಿಗೆ ಜೂ.26ರಂದು ಕೌನ್ಸಿಲಿಂಗ್ ನಡೆಯಲಿದೆ. ಮಿಷನ್ 95+ ಗುರಿ ತಲುಪುವಲ್ಲಿ ವಿಫಲವಾಗಿರಬಹುದು ಆದರೆ ಪುತ್ತೂರು ತಾಲೂಕು ಜಿಲ್ಲೆಯಲ್ಲಿ 2ನೆ ಸ್ಥಾನ ಪಡೆದುಕೊಂಡಿದೆ. ರಾಜ್ಯದ 204 ತಾಲೂಕುಗಳ ಪೈಕಿ 24ನೆ ಸ್ಥಾನ ಪಡೆದುಕೊಂಡಿದೆ. ಕಡಬ, ಕಾಣಿಯೂರು, ಕಬಕ, ಸವಣೂರು ಸರಕಾರಿ ಪ್ರೌಢಶಾಲೆ ಹಾಗೂ ಪೆರ್ನಾಜೆ ಸೀತಾರಾಘವ ಪ್ರೌಢಶಾಲೆಯ ಫಲಿತಾಂಶ ಈ ಬಾರಿ ಕೈಕೊಟ್ಟಿದೆ. ಸರಕಾರಿ ಪ್ರೌಢಶಾಲೆಗಳ ಶಿಕ್ಷಕರ ಸಮನ್ವಯದ ಕೊರತೆಯಿಂದ ಫಲಿತಾಂಶದಲ್ಲಿ ಅರ್ಧಕ್ಕರ್ಧ ಕುಸಿದಿದೆ. ಮುಖ್ಯಶಿಕ್ಷಕರ ಸಮಸ್ಯೆಯಿಂದಾಗಿಯೇ ನಿರೀಕ್ಷಿತ ಫಲಿತಾಂಶ ದಾಖಲಾಗಿಲ್ಲ. ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾದರೆ ಕೆಲ ಶಿಕ್ಷಕರು ತನ್ನ ವಿರುದ್ಧವೇ ಕಿರುಕುಳ ಆರೋಪ ಹೊರಿಸುತ್ತಾರೆ. ಇಂತಹ ಶಿಕ್ಷಕರಿಂದ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ತೊಡಕಾಗಿದೆ ಎಂದರು.

94ಸಿ, 94ಸಿಸಿ ಬಗ್ಗೆ ಗೊಂದಲವೇರ್ಪಟ್ಟ ವಿಷಯವನ್ನು ಸಭೆಯ ಗಮನಕ್ಕೆ ತರಲಾಯಿತು. ಈ ಬಗ್ಗೆ ವಿಎಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ತಾಲೂಕಿನ ಹೆಚ್ಚಿನ ಗ್ರಾಮದಲ್ಲಿ ಒಂದೇ ಒಂದು ಹಕ್ಕುಪತ್ರ ನೀಡದ ಉದಾಹರಣೆ ಇದೆ ಎಂದು ಸದಸ್ಯರು ಪ್ರಸ್ತಾಪಿಸಿದರು.

ಉತ್ತರಿಸಿದ ತಹಶೀಲ್ದಾರ್ ಸಣ್ಣರಂಗಯ್ಯ, ತಾಲೂಕಿನಲ್ಲಿ 6,700 ಅರ್ಜಿ ಸ್ವೀಕೃತವಾಗಿದ್ದು, 1,700 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಗೋಮಾಳ, ಪಟ್ಟಾ ಜಮೀನಿನ ಅರ್ಜಿಗೆ ಪ್ರಾಶಸ್ತ್ಯ ನೀಡಿಲ್ಲ. ಅರಣ್ಯ ಇಲಾಖೆಯಲ್ಲಿರುವ ಅರ್ಜಿಗಳ ಬಗ್ಗೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

 ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ಪುತ್ತೂರು ತಹಶೀಲ್ದಾರ್ ಸಣ್ಣ ರಂಗಯ್ಯ, ಕಡಬ ತಹಶೀಲ್ದಾರ್ ಬಿ. ನಿಂಗಯ್ಯ ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಸ್ವಾಗತಿಸಿ ಕಲಾಪ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News