×
Ad

ಗಂಡಿಬಾಗಿಲು ಶಾಲೆಯಲ್ಲಿ ಶಿಕ್ಷಕರ ಕೊರತೆ: ಜನಪ್ರತಿನಿಧಿಗಳು, ಎಸ್‌ಡಿಎಂಸಿ, ಪೋಷಕರ ನಿಯೋಗದಿಂದ ಬಿಇಒಗೆ ಮನವಿ

Update: 2016-05-24 17:58 IST

ಪುತ್ತೂರು, ಮೇ 24: ಮೇ 28ರಂದು ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಗಂಡಿಬಾಗಿಲು ಶಾಲೆಯಲ್ಲಿ ಪ್ರಸಕ್ತ ಇರುವ ಖಾಲಿ ಹುದ್ದೆಯನ್ನು ಭರ್ತಿ ಮಾಡದೇ ಇದ್ದಲ್ಲಿ ಶಾಲಾ ಪ್ರಾರಂಭೋತ್ಸವ ಮಾಡಲು ಬಿಡಲಾರೆವು ಎಂಬ ಶಾಲಾ ಪೋಷಕರ ನಿರ್ಧಾರದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಎಸ್‌ಡಿಎಂಸಿ, ಪೋಷಕರ ನಿಯೋಗವೊಂದು ಮೇ 24ರಂದು ಶಿಕ್ಷಾಣಾಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯ ಕುರಿತು ಮನವರಿಕೆ ಮಾಡಿತು.

ಗಂಡಿಬಾಗಿಲು ಶಾಲೆಯಲ್ಲಿ ಕಳೆದ 4 ವರ್ಷದ ಹಿಂದೆ 280 ಮಕ್ಕಳು ಇದ್ದರು, ಶಿಕ್ಷಕರ ಕೊರತೆ ಎದುರಾಗತೊಡಗಿದಂತೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿತು. ಇದೀಗ ಶಾಲೆಯಲ್ಲಿ ಮಕ್ಕಳ ಸಂಖ್ಯೆ 150ಕ್ಕೆ ಇಳಿದಿದೆ, ಮತ್ತೆ ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ಕೇಳಲಾರಂಭಿಸಿದ್ದಾರೆ. ಶಾಲೆಗಳಿಗೆ ಶಿಕ್ಷಕರ ನೇಮಕ ಆಗದಿದ್ದಲ್ಲಿ ಸರಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ಆಗಬಹುದು, ಅದಕ್ಕೆ ಅವಕಾಶ ಕಲ್ಪಿಸದೆ ಇಲ್ಲಿಗೆ ಕನಿಷ್ಠ 5 ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟರು.
 
 ಸಮಸ್ಯೆ ಬಗೆಹರಿಸಲಾಗುವುದು-ಶಶಿಧರ್ ಪೋಷಕರ ಬೇಡಿಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಪ್ರತಿಕ್ರಿಯಿಸಿ ಗಂಡಿಬಾಗಿಲು ಶಾಲೆಯಲ್ಲಿ 4 ಶಿಕ್ಷಕರು ಇದ್ದಾರೆ. ಆದರೆ ಅಲ್ಲಿ ಸ್ಪಲ್ಪ ಗೊಂದಲ ಇದೆ, ಅದನ್ನು ಸರಿಪಡಿಸಲಾಗುವುದು ಎಂದರು. ಆಗ ಪೋಷಕರು ಮತ್ತೆ ಪ್ರತಿಕ್ರಿಯಿಸಿ ದಾಖಲೆಯಲ್ಲಿ 4 ಶಿಕ್ಷಕರು ಇದ್ದಾರೆ. ವಾಸ್ತವವಾಗಿ ಅಲ್ಲಿ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು, ಪೋಷಕರ ಸಮಸ್ಯೆಯನ್ನು ಅರ್ಥೈಸಿಕೊಂಡು ಸಮಸ್ಯೆಗೆ ಪರಿಹಾರ ನೀಡಿ ಎಂದರು.

ಆಗ ಶಿಕ್ಷಣಾಧಿಕಾರಿ ಪ್ರತಿಕ್ರಿಯಿಸಿ, ಶಾಲೆಯಿಂದ ವಿದ್ಯಾಭ್ಯಾಸದ ಸಲುವಾಗಿ ಹೋದ ಶಿಕ್ಷಕಿಯ ಬದಲಿಗೆ ಅವರ ಮೂಲಕವೇ ಬದಲಿ ಶಿಕ್ಷಕರ ವ್ಯವಸ್ಥೆ ಮಾಡಲಾಗುವುದು. ಪೋಷಕರು ತಿಳಿಸಿರುವಂತೆ ಇನ್ನೋರ್ವ ಶಿಕ್ಷಕಿ ನಿಯೋಜನೆಯಲ್ಲಿ ಬಂದವರಲ್ಲ, ಅವರು ಗಂಡಿಬಾಗಿಲು ಶಾಲೆಗೆ ವರ್ಗಾವಣೆ ಬಯಸಿ ಬಂದವರು. ಅವರ ಹೆರಿಗೆ ರಜೆ ಆರಂಭ ಆಗುವುದು ಆಗಸ್ಟ್ ತಿಂಗಳ ಬಳಿಕ. ಅವರು ಆ ಮುನ್ನ ಶಾಲೆಗೆ ರಜೆ ಹಾಕದೆ, ಶಾಲಾ ಪ್ರಾರಂಭೋತ್ಸವದಿಂದಲೇ ಶಾಲೆಯಲ್ಲಿ ಇರುವಂತೆ ಕ್ರಮ ಜರಗಿಸಲಾಗುವುದು, ಇನ್ನು ಉಳಿದಂತೆ ಟಿಜಿಟಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಕೌನ್ಸಿಲಿಂಗ್‌ನಲ್ಲಿ ಗಂಡಿಬಾಗಿಲು ಶಾಲೆಗೆ ಓರ್ವ ಶಿಕ್ಷಕರು ಬರುವಂತೆ ಪ್ರೇರೇಪಣೆ ನೀಡಲಾಗುವುದು, ಅಲ್ಲಿಂದ ಆಗದಿದ್ದಲ್ಲಿ ಮುಂದೆ ಬದಲಿಯಾಗಿ ನಿಯೋಜನೆ ಮಾಡಲಾಗುವುದು, ಇದೆಲ್ಲವೂ ಇದೇ 28ಕ್ಕೆ ಮುನ್ನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಮತ್ತು ತಾಲೂಕು ಪಂಚಾಯತ್ ಸದಸ್ಯೆ ಜಯಂತಿ ಆರ್. ಗೌಡ ಪ್ರತಿಕ್ರಿಯಿಸಿ, ತಾವು ಈ ಭರವಸೆಯನ್ನು ಈಡೇರಿಸಬೇಕು, ಯಾಕೆಂದರೆ ಇಲ್ಲಿನ ಸಮಸ್ಯೆ ಗಂಭೀರವಾಗಿದೆ, ಉತ್ತಮ ಶಾಲೆಯಲ್ಲಿ ಈ ರೀತಿಯಾಗಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತ ಆಗುವುದು ಸರಿ ಅಲ್ಲ, ನಿಮ್ಮ ಈ ಕ್ರಮಕ್ಕೆ ಈಗ್ಗಿಂದಲೇ ಚಾಲನೆ ಕೊಡಬೇಕು ಎಂದರು. ಅದಕ್ಕೆ ಶಿಕ್ಷಣಾಧಿಕಾರಿ ಸಮ್ಮತಿ ಸೂಚಿಸಿ, ಶಾಲೆ ಪ್ರಾರಂಭದ ದಿನ ಶಾಲೆಯಲ್ಲಿ ಕನಿಷ್ಠ 4 ಶಿಕ್ಷಕರು ಇರುವಂತೆ ಮಾಡುವುದಾಗಿ ತಿಳಿಸಿದರು.

 ಶಿಕ್ಷಕರು ಬರದಿದ್ದರೆ, ಪ್ರಾರಂಭೋತ್ಸವ ಇಲ್ಲ

ಶಿಕ್ಷಣಾಧಿಕಾರಿ ಮಾತಿಗೆ ಸಮ್ಮತಿಸಿದ ಪೋಷಕರು, ಶಾಲೆ ಪ್ರಾರಂಭೋತ್ಸವದಂದು ಶಾಲೆಯಲ್ಲಿ ಟಿಜಿಟಿ ಸಹಿತ 5 ಶಿಕ್ಷಕರು ಇರಬೇಕು. ಇಲ್ಲದಿದ್ದಲ್ಲಿ ಕನಿಷ್ಠ 4 ಶಿಕ್ಷಕರಾದರೂ ಇರಬೇಕು. ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಶಾಲೆಯ ಬೀಗ ತೆರೆಯಲು ಪೋಷಕರು ಬಿಡುವುದಿಲ್ಲ, ಈ ರೀತಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಶಿಕ್ಷಣಾಧಿಕಾರಿಗೆ ಕೇಳಿಕೊಳ್ಳಲಾಯಿತು.

ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ, ತಾಲೂಕು ಪಂಚಾಯತ್ ಸದಸ್ಯೆ ಜಯಂತಿ ಆರ್. ಗೌಡ, ಕೊಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ನಝೀರ್ ಪೂರಿಂಗ, ಕೆ.ಎ. ಸುಲೈಮಾನ್, ಹೇಮಾವತಿ, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಬಡ್ಡಮೆ, ಮಾಜಿ ಅಧ್ಯಕ್ಷ, ಪತ್ರಕರ್ತ ಸಿದ್ದಿಕ್ ನೀರಾಜೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆಸ್ವಪ್ನ, ಸದಸ್ಯರುಗಳಾದ ಬಾಬು ಅಗರಿ, ಇಸ್ಮಾಯಿಲ್, ಪೆರ್ನು,ಜಾನಕಿ, ಉಷಾ, ಸರಸ್ವತಿ, ಬೇಬಿ, ಸುಶೀಲ, ನಸೀಮ, ಪೋಷಕರಾದ ಜಾನಕಿ, ಪಾರ್ವತಿ, ಮೈಮೂನ, ರಹಿಮತ್, ಸಾರಮ್ಮ, ಮುತ್ತಮ್ಮರವರನ್ನು ಒಳಗೊಂಡಂತೆ ಸುಮಾರು 60 ಮಂದಿ ನಿಯೋಗದಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News