ಸಮಾಧಿಯಲ್ಲಿ ವೃಂದಾವನ ಐಕ್ಯರಾದ ಕೊಲ್ಯ ಶ್ರೀ
ಉಳ್ಳಾಲ, ಮೇ 24: ಅನಾರೋಗ್ಯದಿಂದ ಮಂಗಳವಾರದಂದು ದೈವೈಕ್ಯರಾದ ಕೊಲ್ಯ ಮೂಕಾಂಬಿಕ ಮಠದ ಮಠಾಧಿಪತಿ ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಮಂಗಳವಾರದಂದು ಮಠದ ಆವರಣದಲ್ಲಿ ಸ್ವಾಮೀಜಿಯವರೇ ದಶಕದ ಹಿಂದೆ ನಿರ್ಮಿಸಿದ್ದ ಸಮಾಧಿಯಲ್ಲಿ ಐಕ್ಯ ಮಾಡಲಾಯಿತು.
ಕ್ಷೇತ್ರದಲ್ಲಿ ಕೊಲ್ಯ ಸ್ವಾಮೀಜಿ ಈ ಹಿಂದೆಯೇ ನಿರ್ಧರಿಸಿದಂತೆ ನಿರ್ಮಿಸಿಟ್ಟಂತಹ ಸಮಾಧಿಯ ಸಭಾಂಗಣದಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯಿಂದ ಬೆಳಗ್ಗಿನ ತನಕ ಭಜನಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಮೂಕಾಂಬಿಕಾ ದೇವಿಗೆ ಪೂಜೆಗೈದ ನಂತರ ಕಲಶಾಭಿಷೇಕ ಮಾಡಿ, ಮೃತದೇಹಕ್ಕೆ ಸ್ನಾನ ಮಾಡಿಸಿದ ಬಳಿಕ ಮುಖ್ಯ ಅರ್ಚಕರು ಧಾರ್ಮಿಕ ವಿಧಿ ವಿಧಾನ ಪೂರೈಸಿದರು. ಅಲ್ಲಿಂದ ಅಸ್ತಂಗತರಾದ ಸ್ವಾಮೀಜಿ ಈ ಮೊದಲೇ ನಿರ್ಧರಿಸಿರುವಂತೆ ಜ್ಞಾನಮಂದಿರದಲ್ಲಿ ಇರಿಸಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಬೆಳಗ್ಗೆ 8ರಿಂದ 9 ರತನಕ ಅವಕಾಶ ಮಾಡಿಕೊಡಲಾಯಿತು.
ಜಿಲ್ಲೆಯ ಹಿರಿಯ ಯತಿಗಳ ನೇತೃತ್ವದಲ್ಲಿ ಕೊಲ್ಯ ಶ್ರೀಗಳ ಆತ್ಮ ಸದ್ಗತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪೂರ್ವ ನಿಗದಿಯಂತೆ 2005ರಲ್ಲಿಯೇ ತೋಡಲಾದ ನಾಲ್ಕು ಅಡಿ ಉದ್ದ ಅಗಲದ ಒಂಭತ್ತು ಅಡಿ ಆಳದ ಸಮಾಧಿ ಗುಂಡಿಯಲ್ಲಿ ದೀಪ, ಅಗರಬತ್ತಿ, ಪಾದುಕೆ, ಶಂಖ ಸ್ವಾಮೀಜಿ ಇರಿಸಿದ್ದರು. ಅವರು ಸೂಚಿಸಿದ ರೀತಿಯಲ್ಲಿ ಬಾಯಿಗೆ ಶಂಖ ಇಟ್ಟು ದೇಹವನ್ನು ಸಮಾಧಿ ಮಾಡಲಾಯಿತು.
ಸಮಾಧಿ ಪ್ರಕ್ರಿಯೆಯಲ್ಲಿ ಒಡಿಯೂರು ಸ್ವಾಮೀಜಿ, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕರಿಂಜೆ ಮುಕ್ತಾನಂದ ಸ್ವಾಮೀಜಿ, ಶಶಿಕಾಂತ ಮಣಿ ಬಾಳೆಕೋಡಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ,ಶ್ರೀ ಕ್ಷೇತ್ರ ಕನ್ಯಾಡಿಯ ಬ್ರಹ್ಮಾನಂದ ಸ್ವಾಮೀಜಿ, ಮೂಡುಬಿದಿರೆಯ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸತ್ಯಾನಂದ ಸ್ವಾಮೀಜಿ, ಕಾರಿಂಜ ಸ್ವಾಮೀಜಿ, ಯಾದವ ಮಠದ ಯಾದವಾನಂದ ಸ್ವಾಮಿ, ಯಾದವ ಸಭಾದ ಪ್ರಧಾನ ಕಾರ್ಯದರ್ಶಿ ಲಕ್ಮೀಪತಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಕೆ. ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು , ಕುಂಟಾರು ರವೀಶ ತಂತ್ರಿ, ಯೋಗೀಶ್ ಕುಂಬ್ಳೆ, ನ್ಯಾಯವಾದಿ ಮೋನಪ್ಪ ಭಂಡಾರಿ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಪ್ರೊ. ಎಂ.ಬಿ.ಪುರಾಣಿಕ್, ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷಿ ್ಮ ಗಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸತ್ಯಜಿತ್ ಸುರತ್ಕಲ್, ಚಂದ್ರಶೇಖರ್ ಉಚ್ಚಿಲ್, ಸುಧಾಕರ ರಾವ್ ಪೇಜಾವರ, ಸುಲೋಚನಾ ಜಿ.ಕೆ. ಭಟ್, ಮಹಾಬಲ ಭಟ್, ಕಸ್ತೂರಿ ಪಂಜ, ದತ್ತಾತ್ರೇಯ ಯೆಯ್ಯಾಡಿ, ಎ.ಜೆ ಶೇಖರ್, ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಹಾಗೂ ಬಾಬು ಬಂಗೇರ ಸೇರಿದಂತೆ ಯತಿಗಳು, ಧಾರ್ಮಿಕ ಮುಖಂಡರು, ಜನನಾಯಕರು, ಸಮಾಜಸೇವಕರು, ಮಠದ ಭಕ್ತರು, ಅನುಯಾಯಿಗಳು ಸೇರಿದಂತೆ ಸಹಸ್ರ ಸಂಖ್ಯೆಯ ಜನರು ವೃಂದಾವನ ವಿಧಿಗೆ ಸಾಕ್ಷಿಯಾದರು.