ಕೇಂದ್ರ, ರಾಜ್ಯ ಸರಕಾರಗಳಿಂದ ಜನವಿರೋಧಿ ನೀತಿ ಆರೋಪ: ಎಡಪಕ್ಷಗಳಿಂದ ಪ್ರತಿಭಟನೆ
ಮಂಗಳೂರು, ಮೇ 24: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಎಡಪಕ್ಷಗಳು ಜೂನ್‌ನಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆಗೆ ಪೂರ್ವಭಾವಿಯಾಗಿ ಇಂದು ದ.ಕ. ಜಿಲ್ಲಾ ಮಟ್ಟದ ಪ್ರತಿಭಟನಾ ಸಭೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು.
ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರಕ್ಕೆ ಬೇಸತ್ತು ಜನ ಕಾಂಗ್ರೆಸ್ಸನ್ನು ಆಡಳಿತಕ್ಕೂ ತಂದರೂ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರಿಗೆ ಕನಿಷ್ಠ ಸವಲತ್ತು ಒದಗಿಸುವಲ್ಲಿಯೂ ವಿಫಲವಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರಕಾರವು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದೆಯಲ್ಲದೆ ಬಂಡವಾಳಶಾಹಿಗಳ ಪರವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.
ಸಿಪಿಐ ದ.ಕ. ಜಿಲ್ಲಾ ಮಂಡಳಿ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವೇಳೆಗೆ ಕಪ್ಪುಹಣ ವಿದೇಶದಿಂದ ತರುವುದಾಗಿ ಹೇಳಿದ ಬಿಜೆಪಿಯು ಅದನ್ನು ನೆರವೇರಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಬ್ಯಾಂಕುಗಳಿಗೆ ಕಾರ್ಪೊರೇಟ್ ಉದ್ಯಮಿಗಳು 3 ಲಕ್ಷ ಕೋಟಿ ರೂ.ಬಾಕಿದಾರರಾಗಿದ್ದು, ಅವು ಹಿಂದೆ ಪಡೆಯಲಾಗದ ಮೊಬಲಗು ಎಂದು ಬ್ಯಾಂಕುಗಳು ಘೋಷಿಸಿದೆ. ಸರಕಾರಕ್ಕೆ 9,000 ಕೋಟಿ ರೂ. ತೆರಿಗೆ ಬಾಕಿದಾರರಾದ ವಿಜಯ ಮಲ್ಯ ದೇಶಬಿಟ್ಟು ಪರಾರಿಯಾಗುವುದಕ್ಕೆ ಕೇಂದ್ರ ಸರಕಾರ ಎಡೆಮಾಡಿಕೊಟ್ಟಿದೆ. ಆದರೆ ಕೇವಲ ಸಾವಿರ ರೂಪಾಯಿಗಳಲ್ಲಿ ಸಾಲ ಬಾಕಿದಾರರಾದ ರೈತರನ್ನು ಬಂಧಿಸಲಾಗುತ್ತಿದೆ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.
ಕೇಂದ್ರ ಸರಕಾರದ ಗೋದಾಮಗಳಲ್ಲಿ 43,000 ಟನ್ ಆಹಾರ ದಾಸ್ತಾನು ಇದ್ದರೂ ಸರಕಾರ ಆಹಾರ ಹಂಚಿಕೆ ಮಾಡುತ್ತಿಲ್ಲ. ಆಹಾರ ಭದ್ರತಾ ಕಾನೂನು ಜಾರಿಗೊಳಿಸಲು ಕೇಂದ್ರ ಸರಕಾರ ಆಸಕ್ತಿ ವಹಿಸುತ್ತಿಲ್ಲ. ಅಲ್ಲದೆ, ಗ್ರಾಮೀಣ ಬಡತನ ನಿವಾರಣೆಗೆ ಸಂಬಂಧಿಸಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಯಗತಗೊಳಿಸುವಲ್ಲಿ ಕಾಳಜಿ ತೋರಿಸುತ್ತಿಲ್ಲ. ಮೋದಿಯವರು ತಮ್ಮ ಮಾತಿನ ಚಮತ್ಕಾರ, ನಟನೆಗಳಿಂದ ಜನರನ್ನು ಮರುಳುಗೊಳಿಸಿದ್ದಾರೆ. ಜನರು ಮಾತಿಗೆ ಮರುಳಾಗದೆ, ಅವರ ಸರಕಾರದ ಜನವಿರೋಧಿ ನೀತಿಗಳನ್ನು ಬಯಲುಗೊಳಿಸಬೇಕು ಎಂದು ವಿ. ಕುಕ್ಯಾನ್ ಹೇಳಿದರು.
ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಜನರ ಪ್ರಮುಖ ಸಮಸ್ಯೆಗಳಾದ ಜಿಲ್ಲೆಯ ಜನರಿಗೆ ನೀರು, ಬೀಡಿ ಉದ್ಯಮದ ರಕ್ಷಣೆ ಬಗ್ಗೆ ಇವರುಗಳು ಮಾತನಾಡುತ್ತಿಲ್ಲ. ಸಂಸದರು ಈ ಬಗ್ಗೆ ಸಂಸತ್ತಿನಲ್ಲೂ ದನಿ ಎತ್ತುತ್ತಿಲ್ಲ ಎಂದು ವಸಂತ ಆಚಾರಿ ಖಂಡಿಸಿದರು.
ಸಿಪಿಐ ಜಿಲ್ಲಾ ಮಂಡಳಿಯ ಕರುಣಾಕರ ವಂದಿಸಿದರು. ಸಿಪಿಐ(ಎಂ) ಮುಖಂಡರಾದ ಯಾದವ ಶೆಟ್ಟಿ, ಬಿ.ಎಂ. ಭಟ್, ಸುನೀಲ್‌ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಸಿಪಿಐ ಮುಖಂಡರಾದ ಸೀತಾರಾಮ್ ಬೇರಿಂಜೆ, ಬಿ. ಶೇಖರ್, ಶಿವಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ಸಭೆಗೂ ಮೊದಲು ಮಂಗಳೂರು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಎಡಪಕ್ಷಗಳ ಕಾರ್ಯಕರ್ತರಿಂದ ಮೆರವಣಿಗೆ ನಡೆಯಿತು.