ಗುರುವಾಯನಕೆರೆ: ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತಿದೆ ಈ ಸರಕಾರಿ ಶಾಲೆ

Update: 2016-05-24 13:44 GMT

ಬೆಳ್ತಂಗಡಿ, ಮೇ 24: ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುವುದಿಲ್ಲ, ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು ಒಂದೆಡೆಯಾದರೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲೊಂದು ಸರಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಳನ್ನೂ ಮೀರಿಸುವ ರೀತಿಯಲ್ಲಿ ಸತತವಾಗಿ ಐದು ವರ್ಷಗಳಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಪಡೆದುಕೊಂಡು ರಾಜ್ಯಕ್ಕೆ ಮಾದರಿಯಾಗಿ ಮುನ್ನಡೆಯುತ್ತಿದೆ.

ಕುವೆಟ್ಟು ಗ್ರಾಮ ಪಂಚಾಯತು ವ್ಯಾಪ್ತಿಯ ಗುರುವಾಯನಕೆರೆ ಪೇಟೆಯ ಸನಿಹ ಗುಡ್ಡದ ಮೇಲಿರುವ ಪುಟ್ಟ ಶಾಲೆಯ ಸಾಧನೆಗಳು ಒಂದೆರಡಲ್ಲ. ತಾಲೂಕಿನ ಏಕೈಕ ಐಪಿಎಸ್ ಅಧಿಕಾರಿಯೂ ಇದೇ ಶಾಲೆಯಲ್ಲಿ ಕಲಿತವರು ಎಂದರೆ ಇದರ ಹಿರಿಮೆಯನ್ನು ತಿಳಿಯಬಹುದಾಗಿದೆ.

ಈ ಶಾಲೆಗೆ ಬರುವವರು ಯಾರೂ ಶ್ರೀಮಂತರ ಮನೆಯ ಮಕ್ಕಳಲ್ಲ. ಮೂರು ಹೊತ್ತಿನ ಊಟಕ್ಕೂ ಪರದಾಡುವ ಬಡ ಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಬರೆದ ಎಲ್ಲ ಮಕ್ಕಳೂ ಬಿಪಿಎಲ್ ಕುಟುಂಬಗಳಿಂದ ಬಂದವರೇ ಆಗಿದ್ದರು. ಟ್ಯೂಶನ್ ವಿಚಾರ ಇಲ್ಲಿನ ಮಕ್ಕಳಿಗೆ ಗೊತ್ತೇ ಇಲ್ಲ. ಮನೆಯಲ್ಲಿ ಹೇಳಿಕೊಡುವವರೂ ಇಲ್ಲ. ಆದರೂ ಈ ಶಾಲೆಯ ಮಕ್ಕಳ ಸಾಧನೆ ಯಾವ ಖಾಸಗಿ ಶಾಲೆಯನ್ನೂ ಮೀರಿಸುವಂತಿದೆ.

ಗುರುವಾಯನಕೆರೆ ಶಾಲೆ ಮೊದಲಿನಿಂದಲೂ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬರುತ್ತಿತ್ತು. 2012ರಿಂದೀಚೆಗೆ ಸತತವಾಗಿ ಶೇ.100 ಫಲಿತಾಂಶ ಬರುತ್ತಿದೆ. ಈ ವರ್ಷ ಇಲ್ಲಿ 83 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಇಬ್ಬರು 600ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರೆ, 37 ಮಂದಿ 500 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೇ ಉತ್ತೀರ್ಣರಾಗಿದ್ದಾರೆ.

ಈ ಶಾಲೆಗೆ ಸಮೀಪದ ಹಳ್ಳಿಗಳಿಂದ ವಿದ್ಯಾರ್ಥಿಗಳು ಎಂಟನೇ ತರಗತಿಗೆ ಬರುತ್ತಾರೆ. ಬರುವ ಎಲ್ಲರಿಗೂ ಇಲ್ಲಿ ಕಲಿಯುವ ಅವಕಾಶವನ್ನು ನೀಡಲಾಗುತ್ತದೆ. ಬರುವ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಕಲಿಸಿ ಅಂತಿಮ ಪರೀಕ್ಷೆಗೆ ಸಿದ್ಧಗೊಳಿಸುವ ಕಾರ್ಯವನ್ನು ಇಲ್ಲಿನ ಶಿಕ್ಷಕರು ಮಾಡುತ್ತಿದ್ದಾರೆ. ಶಿಕ್ಷಕರ ನಿರಂತರ ಪ್ರಯತ್ನದ ಫಲವಾಗಿಯೇ ಶಾಲೆ ಉತ್ತಮ ಫಲಿತಾಂಶವನ್ನು ಪಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News