ಪಂಪ್‌ವೆಲ್‌ನಲ್ಲಿ ಸರ್ವಿಸ್ ಬಸ್ ನಿಲ್ದಾಣ: ಜಾಗತಿಕ ಟೆಂಡರ್‌ಗೆ ಸಚಿವ ರೈ ಸಲಹೆ
ಮಂಗಳೂರು, ಮೇ 24: ನಗರದ ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಜಾಗತಿಕ ಟೆಂಡರ್ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಲಹೆ ನೀಡಿದ್ದಾರೆ.
ಮಂಗಳೂರು ಪಾಲಿಕೆಯ ಪಂಪ್‌ವೆಲ್‌ನ ಬಳಿ ಬಸ್‌ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ಕುರಿತಂತೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು, ಜಾಗತಿಕ ಟೆಂಡರ್ ಆಧಾರದಲ್ಲಿಯೇ ಬಸ್‌ನಿಲ್ದಾಣ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.
30 ವರ್ಷ ಲೀಸ್‌ಗೆ ಈ ಯೋಜನೆಯನ್ನು ಸಂಬಂಧಪಟ್ಟ ಕಂಪೆನಿಯವರಿಗೆ ನೀಡಲಾಗುತ್ತದೆ ಹಾಗೂ ಅದರ ನಿರ್ವಹಣೆ ಜವಾಬ್ದಾರಿಯನ್ನೂ ಅವರೇ ಮಾಡಬೇಕು. ಈ ಸಂಬಂಧ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳುವಂತೆ ಅವರು ಸೂಚಿಸಿದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ, ಜಾಗತಿಕ ಟೆಂಡರ್ ಕರೆಯುವ ಸಂದರ್ಭದಲ್ಲಿ ನಮ್ಮ ಅಗತ್ಯತೆಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಬೇಕು. 160 ಬಸ್ ನಿಲುಗಡೆಗೆ ಅವಕಾಶ ಹಾಗೂ ಸುಮಾರು 50ರಷ್ಟು ಲಘುವಾಹನಗಳ ನಿಲುಗಡೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರು.
ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಜಾಗತಿಕ ಟೆಂಡರ್ ಕರೆಯುವ ಜೊತೆಗೆ ಕರ್ನಾಟಕ ಗೃಹ ಮಂಡಳಿಯವರಿಂದಲೂ ಈ ಬಗ್ಗೆ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸುವಂತೆ ಸೂಚಿಸಿದರು. ಇದು ಸಾಧ್ಯವಾಗದಿದ್ದಲ್ಲಿ ಮನಪಾ ತನ್ನ ಸ್ವಂತ ನೆಲೆಯಲ್ಲಿ ಬಸ್ ನಿಲ್ದಾಣ ನಿರ್ಮಾಣದ ಕಾರ್ಯ ನಡೆಸಬೇಕೇ ಹೊರತು ಕಾಮಗಾರಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೆಹರೂ ಮೈದಾನಿನಲ್ಲಿ 7.50 ಅಡಿ ಎತ್ತರದ ನೆಹರೂ ಕಂಚಿನ ಪ್ರತಿಮೆ
ನಗರದ ನೆಹರೂ ಮೈದಾನದಲ್ಲಿ ಮಾಜಿ ಪ್ರಧಾನಿ ದಿವಂಗತ ಜವಾಹರ ಲಾಲ್ ನೆಹರೂರವರ 7.50 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
ಪಿ.ವಿ ಮೋಹನ್ ಮಾತನಾಡಿ, ನೆಹರೂ ಪ್ರತಿಮೆಯ ಜೊತೆಗೆ ಮೈದಾನಿನ ಪ್ರವೇಶದಲ್ಲಿ ಕಮಾನು ಹಾಗೂ ಪ್ರತಿಮೆಯ ಜೊತೆಗೆ ಹೆಸರು, ವಿವರ ದಾಖಲಿಸಬೇಕು ಎಂದರು.
ಮನಪಾ ಮುಖ್ಯಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸ್‌ಲಾಟ್ ಪಿಂಟೋ, ಕಾರ್ಪೊರೇಟರ್ ಅಪ್ಪಿ, ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಮೂಡಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.
ಸಭಾತ್ಯಾಗ ಮಾಡಿದ ಮನಪಾ ಉಪ ಮೇಯರ್, ವಿಪಕ್ಷ ನಾಯಕಿ!
ನೆಹರೂ ಪ್ರತಿಮೆ ನಿರ್ಮಾಣದ ಕುರಿತಂತೆ ಸಭೆ ಆರಂಭವಾಗುತ್ತಿದ್ದಂತೆ ಆಕ್ಷೇಪಿಸಿದ ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ಮಾಜಿ ಪ್ರಧಾನಿ ನೆಹರೂ ಅವರ ಬಗ್ಗೆ ಗೌರವವಿದೆ. ಆದರೆ, ಪುರಭವನದ ಮುಂಭಾಗ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಮುಂಭಾಗ ನೆಹರೂ ಪ್ರತಿಮೆ ಇರುವಾಗ ಮತ್ತೆ ನೆಹರೂ ಮೈದಾನಿನಲ್ಲಿ ಪ್ರತಿಮೆ ಏಕೆ ಎಂದು ಪ್ರಶ್ನಿಸಿದರಲ್ಲದೆ, ಇದಕ್ಕೆ ತಮ್ಮ ವಿರೋಧವಿದೆ ಎನ್ನುತ್ತಾ ಸಭಾತ್ಯಾಗಕ್ಕೆ ಮುಂದಾದರು.
ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವ ರಮಾನಾಥ ರೈ, ನೆಹರೂ ಮೈದಾನದಲ್ಲಿ ನೆಹರೂ ಪ್ರತಿಮೆ ಮಾಡುವುದರಲ್ಲಿ ತಪ್ಪೇನು? ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರ ಬಗ್ಗೆ ಈ ರೀತಿ ಮಾತನಾಡುವುದೇ ಅಗೌರವ ಮತ್ತು ಅಸಹಿಷ್ಣುತೆ. ಯಾವುದೇ ಕಾರಣಕ್ಕೂ ನೆಹರೂ ಪ್ರತಿಮೆ ನಿರ್ಮಾಣ ಕೈಬಿಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭ ಸಚಿವರು ಹಾಗೂ ಪ್ರತಿಪಕ್ಷ ನಾಯಕಿಯ ಮಧ್ಯೆ ಕೆಲ ನಿಮಿಷ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮಾತನಾಡಿ, ಪಾಲಿಕೆ ಸಭೆಯಲ್ಲಿ ಬಿಜೆಪಿಯವರು ವಿರೋಧಿಸಿರಲಿಲ್ಲ. ಆದರೆ ಇಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಈ ಸಂದರ್ಭ ರೂಪಾ ಡಿ. ಬಂಗೇರ ಹಾಗೂ ಉಪಮೇಯರ್ ಸುಮಿತ್ರ ಕರಿಯ ಸಭಾತ್ಯಾಗ ಮಾಡಿದರು.