×
Ad

ಮೇ 27ರಿಂದ ಮಂಗಳೂರಿನಲ್ಲಿ ಅಖಿಲ ಭಾರತ ಮುಕ್ತ ಸರ್ಫಿಂಗ್

Update: 2016-05-24 20:09 IST

ಮಂಗಳೂರು, ಮೇ 24: ಮಂತ್ರ ಸರ್ಫ್ ಕ್ಲಬ್ ಅಸೋಸಿಯೇಶನ್ ಹಾಗೂ ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಸಹಯೋಗದಲ್ಲಿ ಆಲ್ ಕಾರ್ಗೊ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಮೇ 27ರಿಂದ 29ರವರೆಗೆ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ನಡೆಯಲಿದೆ.

ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಕೂಟವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಸ್ತುತಪಡಿಸುತ್ತಿದ್ದು, ಇದು ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಶನ್ ಹಾಗೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಂಗೀಕೃತ ಕೂಟವಾಗಿದೆ.

ದೇಶದ ಅತ್ಯುನ್ನತ ಸರ್ಫಿಂಗ್ ಪಟುಗಳು ಹಾಗೂ ಅಂತಾರಾಷ್ಟ್ರೀಯ ಸರ್ಫಿಂಗ್ ಪಟುಗಳು ಭಾಗವಹಿಸಲಿದ್ದಾರೆ. 6 ಲಕ್ಷ ರೂ. ಬಹುಮಾನದ ಈ ಟೂರ್ನಿಯಲ್ಲಿ 80ಕ್ಕೂ ಹೆಚ್ಚು ಸರ್ಫರ್‌ಗಳು ಭಾಗವಹಿಸುವರು. ಪುರುಷರ ವಿಭಾಗದಲ್ಲಿ 16ರ ವಯೋಮಿತಿ, ಜೂನಿಯರ್ ಅಥವಾ ಬಾಲಕರು (17- 22 ವರ್ಷ), ಸೀನಿಯರ್ ಅಥವಾ ಪುರುಷರು (22- 28 ವರ್ಷ), ಮಾಸ್ಟರ್ಸ್‌ (28 ವರ್ಷ ಮೇಲ್ಪಟ್ಟವರು) ಭಾಗವಹಿಸುವರು.

 ಈ ಎಲ್ಲ ವಿಭಾಗಗಳಲ್ಲಿ ಮಹಿಳಾ ವರ್ಗಕ್ಕೂ ಸ್ಪರ್ಧೆಗಳಿರುತ್ತವೆ. ವರ್ಲ್ಡ್ ಸರ್ಫ್ ಲೀಗ್‌ನ ಪ್ರಧಾನ ವ್ಯವಸ್ಥಾಪಕ ಸ್ಟೀವ್ ರಾಬರ್ಟ್‌ಸನ್ ಮತ್ತು ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಪ್ರಧಾನ ವ್ಯವಸ್ಥಾಪಕ ಟಿಪ್ ಹೈನ್ ಕೂಟದ ಅಧಿಕೃತ ಉಸ್ತುವಾರಿ ವಹಿಸಲಿದ್ದಾರೆ.

ಯುಎಸ್ ಓಪನ್ ಆಫ್ ಸರ್ಫಿಂಗ್ ಹಾಗೂ ಆಸ್ಟ್ರೇಲಿಯನ್ ಓಪನ್ ಆಫ್ ಸರ್ಫಿಂಗ್‌ನಿಂದ ಸ್ಫೂರ್ತಿ ಪಡೆದು ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ ಈ ಸರ್ಫಿಂಗ್ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಸರ್ಫಿಂಗ್‌ಫೆಡರೇಷನ್ ಆಫ್ ಇಂಡಿಯಾ, ಮಂತ್ರ ಸರ್ಫ್ ಕ್ಲಬ್ ಮತ್ತು ಹೊಸದಾಗಿ ರಚನೆಯಾದ ಕೆನರಾ ಸರ್ಫಿಂಗ್ ಹಾಗೂ ವಾಟರ್ ಸ್ಪೋರ್ಟ್ಸ್ ಪ್ರೊಮೋಷನ್ ಕೌನ್ಸಿಲ್ ಸಹಯೋಗದಲ್ಲಿ ಕೂಟ ಆಯೋಜಿಸಿದೆ.

ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯ ಜೊತೆಗೆ, ಬಾಡಿ ಬೋರ್ಡಿಂಗ್ ಸ್ಪರ್ಧೆ ಹಾಗೂ ಸ್ಟ್ಯಾಂಡ್ ಅಪ್ ಪೆಡಲ್ ರೇಸ್ ಕೂಡಾ ನಡೆಯಲಿದೆ. ಹವಾಮಾನ ಅನುಕೂಲಕರವಾಗಿದ್ದರೆ ಗಾಳಿಪಟ ಸರ್ಫಿಂಗ್ ಪ್ರಾತ್ಯಕ್ಷಿಕೆ ಕೂಡ ನಡೆಯಲಿದೆ.

ಜಾಂಟಿ ರೋಡ್ಸ್ ಕೂಟದ ರಾಯಬಾರಿಯಾಗಿದ್ದು, ಲೈವ್ ಮ್ಯೂಸಿಕ್ ಷೋ, ಆಹಾರ ಮೇಳ ನಡೆಯಲಿದೆ. ಬಾಲಿವುಡ್ ಸೂಪರ್‌ಸ್ಟಾರ್ ಸುನಿಲ್ ಶೆಟ್ಟಿ, ಪೆಡ್ಡಿ ಆಪ್ಟನ್, ಸಂಜು ಸಾಮ್ಸನ್ ಕೂಡಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಸ್ಪರ್ಧೆಯು ಭಾರತದ ಸರ್ಫಿಂಗ್ ಕ್ರೀಡೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಈ ಕೂಟವನ್ನು ಉತ್ತೇಜಿಸಲು ಅತೀವ ಸಂತಸವಾಗುತ್ತಿದೆ. ಇದು ದೇಶದಲ್ಲಿ ಸರ್ಫಿಂಗ್ ಚಿತ್ರಣವನ್ನೇ ಬದಲಿಸಲಿದೆ ಎಂಬ ನಿರೀಕ್ಷೆಯನ್ನು ರಾಯಬಾರಿ ಜಾಂಟಿ ರೋಡ್ಸ್ ಮತ್ತು ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಕಿಶೋರ್ ಕುಮಾರ್ ವ್ಯಕ್ತಪಡಿಸಿದ್ದಾರೆ.

ಈ ಕೂಟವನ್ನು ಪ್ರೇಕ್ಷಕ ಸ್ನೇಹಿಯಾಗಿಸುವ ಸಲುವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯವನ್ನೂ ಕೈಗೊಂಡಿದೆ. ಹೆಲ್ಪಿಂಗ್ ಹ್ಯಾಂಡ್ ಫಾರ್ ಸರ್ಫ್ ಆ್ಯಂಡ್ ಸ್ಯಾಂಡ್ ಘೋಷಣೆಯಡಿ 300ಕ್ಕೂ ಹೆಚ್ಚು ಸ್ವಯಂಸೇವಕರ ಮೂಲಕ ಸ್ಚಚ್ಛತಾ ಕಾರ್ಯ ಕೈಗೊಂಡಿದೆ. ಭಾರತದ ಐಎಸ್‌ಎ ಪ್ರಮಾಣೀಕೃತ ತೀರ್ಪುಗಾರರ ಜೊತೆಗೆ ಆಸ್ಟ್ರೇಲಿಯ ಹಾಗೂ ಫ್ರಾನ್ಸ್‌ನಿಂದಲೂ ತೀರ್ಪುಗಾರರು ಆಗಮಿಸುವರು. ಬಾಲಿಯ ಮೇಡ್ ಸಚಾಂಗ್ ತೀರ್ಪುಗಾರರ ತಂಡದ ನೇತೃತ್ವ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News