ಹಳೆ ಬಂದರಿನ ವ್ಯಾಪಾರಸ್ಥರು ಬೈಕಂಪಾಡಿ ಎಪಿಎಂಸಿ ಪ್ರದೇಶಕ್ಕೆ ಸ್ಥಳಾಂತರಗೊಂಡರೆ ಎಪಿಎಂಸಿ ಸಮಗ್ರ ಅಭಿವೃದ್ಧಿ: ಸಚಿವ ರೈ
ಮಂಗಳೂರು,ಮೇ 24; ಬೈಕಂಪಾಡಿ ಎಪಿಎಂಸಿಯ ಸ್ಥಳದಲ್ಲಿ ನಗರದ ಹಳೆ ಬಂದರಿನ ಎಲ್ಲಾ ವ್ಯಾಪಾರಿಗಳು ವ್ಯಾಪಾರ ನಡೆಸುವುದಾದರೆ ಸರಕಾರ ಎಪಿಎಂಸಿಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಎಪಿಎಂಸಿ ಸಭಾಂಗಣದಲ್ಲಿ ಇಂದು ಎಪಿಎಂಸಿ ಅಭಿವೃದ್ಧಿ ಕುರಿತ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ಕೃಷಿ ಉತ್ಪನ್ನ ಕೇಂದ್ರ (ಎಪಿಎಂಸಿ) ವಿವಿಧ ಕಾರಣಗಳಿಂದ ಬೆಳೆದಿಲ್ಲ. ಇದರ ಸಮಗ್ರ ಅಭಿವೃದ್ಧಿಗಾಗಿ ಪುನಶ್ಚೇತನಗೊಳಿಸಿ ಕಾರ್ಯರೂಪಕ್ಕೆ ತರುವಂತಾಗಬೇಕಿದೆ. 80 ಎಕರೆಯಷ್ಟು ಸ್ಥಳವಿದ್ದರೂ ಉಪಯೋಗಕ್ಕೆ ಬಾರದಂತಹ ಸ್ಥಿತಿ ಎಪಿಎಂಸಿಯದ್ದಾಗಿದೆ. ಬಂದರಿನ ಎಪಿಎಂಸಿ ಸಬ್‌ಯಾರ್ಡ್‌ನಿಂದ ವರ್ತಕರನ್ನು ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಿ ಸಾಧಕ- ಬಾಧಕಗಳನ್ನು ವಿಮರ್ಶೆ ಮಾಡಿದ ಬಳಿಕ ನಿರ್ಣಯ ಕೈಗೊಳ್ಳಬೇಕು. ಈ ಹಿಂದೆ ಎಪಿಎಂಸಿ ಕೇಂದ್ರವು ಅಭಿವೃದ್ಧಿಯಾಗಬೇಕೆಂಬ ಯಾವುದೇ ಪ್ರಸ್ತಾವನೆಯಿಲ್ಲದೆ, ಯಥಾಸ್ಥಿತಿಯಲ್ಲಿ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಅಭಿವೃದ್ಧಿಯ ದೃಷ್ಟಿಕೋನ ಹೊಂದಿರದೆ ವ್ಯಾಪಾರ ನಡೆಯಬೇಕೆಂದು ಯಾರೂ ಯೋಚನೆ ಮಾಡಿಲ್ಲದಿರುವುದು ವಿಪರ್ಯಾಸ ಎಂದು ಹೇಳಿದರು.
ದ.ಕ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮಾತನಾಡಿ, ಬಂದರು ಎಪಿಎಂಸಿ ಸಬ್‌ಯಾರ್ಡ್‌ನಿಂದ ಬೈಕಂಪಾಡಿಗೆ ವರ್ತಕರು ಸ್ಥಳಾಂತರಗೊಂಡರೆ ಬಂದರು ರಸ್ತೆ, ಬೀಬಿ ಅಲಾಬಿ ರಸ್ತೆ ಹಾಗೂ ಕಾಳಿಕಾಂಬ ದೇವಸ್ಥಾನ ರಸ್ತೆ ನಗರದ ಮುಖ್ಯ ರಸ್ತೆಗಳಂತಾಗುತ್ತದಲ್ಲದೇ, ಈ ಪ್ರದೇಶಗಳು ಸಮಗ್ರ ಅಭಿವೃದ್ಧಿಯಾಗುತ್ತವೆ. ಎರಡೆರಡು ಕಡೆಗಳಲ್ಲಿ ಎಪಿಎಂಸಿಗಳಿರುವುದರಿಂದ ಸಮಸ್ಯೆಗಳಾಗುತ್ತವೆ. ಹಳೆ ಬಂದರು ಪ್ರದೇಶದಲ್ಲಿ ಘನ ವಾಹನಗಳ ಸಾಗಾಟದಿಂದ ಇತರ ವಾಹನಗಳು ಸಾಗಲು ಸಮಸ್ಯೆಗಳಾಗುತ್ತವೆ. ಎಲ್ಲಾ ವರ್ತಕರನ್ನು ಬೈಕಂಪಾಡಿ ಎಪಿಎಂಸಿಗೆ ಸ್ಥಳಾತರಿಸಿದಲ್ಲಿ ರಸ್ತೆ ಸಂಚಾರ ಸಮಸ್ಯೆ ಪರಿಹಾರವಾಗುತ್ತಲ್ಲದೇ, ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೂ ಸಹಾಯಕವಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಸಚಿವ ಕೆ. ಅಭಯ ಚಂದ್ರ ಜೈನ್, ಶಾಸಕ ಮೊಯ್ದೀನ್ ಬಾವಾ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಹೆಚ್ಚುವರಿ ಆಯುಕ್ತ ಗೋಕುಲದಾಸ್ ನಾಯಕ್, ಮಂಗಳೂರು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಜಿ. ವಿಶ್ವನಾಥ್ ಕಾಮತ್, ಎಸಿಪಿ ಉದಯನಾಯಕ್, ದೇವರಾಜ್ ಅರಸ್ ಟ್ರಕ್ ಟರ್ಮಿನಲ್‌ನ ಎಂ.ಡಿ. ಮಲ್ಲಿಕಾರ್ಜುನ, ಕೆಸಿಸಿಐ ಆಧ್ಯಕ್ಷ ರಾಮ್ ಮೋಹನ ಪೈ ಮಾರೂರು ಮತ್ತಿತರರು ಉಪಸ್ಥಿತರಿದ್ದರು.