ಕೊಣಾಜೆ: ಅಂಬೇಡ್ಕರ್ ನಗರದಲ್ಲಿ ಮನೆಯಂಗಳ ಮಾಹಿತಿ ಜಲ ಜಾಗೃತಿ
ಕೋಣಾಜೆ, ಮೇ 24: ಬೆಳ್ಮ ಗ್ರಾ.ಪಂ. ವ್ಯಾಪ್ತಿಯ ಅಂಬೇಡ್ಕರ್ ನಗರ ಪ.ಜಾತಿ ಕಾಲನಿಯಲ್ಲಿ ನೆನೆಗುದಿಗೆ ಬಿದ್ದಿರುವ ಕುಡಿಯುವ ನೀರಿನ ಸಾರ್ವಜನಿಕ ಬಾವಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಸ್ಥಳೀಯ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ಮತ್ತು ಎಲ್ಲಾ ಅರ್ಹ ಕುಟುಂಬಗಳ ಜಮೀನಿನಲ್ಲಿ ಮಹಾತ್ಮಗಾಂಧಿ ನರೇಗಾದಡಿ ಬಾವಿ ರಚನೆ ಹಾಗೂ ಇಂಗುಗುಂಡಿ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ ಸೂಚಿಸಿದ್ದಾರೆ.
ಅವರು ಇಂದು ಅಂಬೇಡ್ಕರ್ ನಗರದ ಸಂತೋಷ್ ಎಂಬವರ ಮನೆಗೆ ಅಳವಡಿಸಿದ ಸೋಲಾರ್ ದೀಪ ಬೆಳಗಿಸಿ ನಂತರ ನಡೆದ ಮನೆಯಂಗಳ ಮಾಹಿತಿ ಜಲ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂತೋಷ್‌ರ ಮನೆಯ ಸಂಪೂರ್ಣ ಸ್ವಚ್ಛತೆ ಮತ್ತು ಮನೆಗೆ ಸೋಲಾರ್ ಅಳವಡಿಸಿರುವುದು, ವಿಜಯ ಎಂಬವರು ತಮ್ಮ ಜಮೀನಿನಲ್ಲಿ ತೆರೆದ ಬಾವಿಗಳು ಮತ್ತು ಇಂಗುಗುಂಡಿಗಳ ಮೂಲಕ ಮಾಡುತ್ತಿರುವ ಜಲಸಂರಕ್ಷಣೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಮಾದರಿಯಲ್ಲಿ ಇಲ್ಲಿನ ಎಲ್ಲಾ ಪ.ಜಾತಿ ಮನೆಗಳಿಗೆ ಸೋಲಾರ್ ಅಳವಡಿಸುವುದು, ನರೇಗಾದಡಿ ಮನೆಗೊಂದು ಬಾವಿ, ಇಂಗುಗುಂಡಿ ನಿರ್ಮಾಣ, ತೋಟಗಾರಿಕೆ, ಹಟ್ಟಿ ನಿರ್ಮಾಣ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಂಡು ಆದ್ಯತೆಯಲ್ಲಿ ಅನುಷ್ಠಾನ ಮಾಡುವಂತೆ ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಿದರು.
ಮಹಾತ್ಮಗಾಂಧಿ ನರೇಗಾ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಅಂಬೇಢ್ಕರ್ ನಗರದ ಪ.ಜಾತಿ ಕುಟುಂಬದ ಮನೆಗಳಲ್ಲಿ ಆರಂಭವಾಗಿರುವ ಗೃಹ ಸ್ವಚ್ಛತಾ ಅಭಿಯಾನ, ಸೌರಶಕ್ತಿ ಅಭಿಯಾನ ಹಾಗೂ ಜಲ ಜಾಗೃತಿ ಅಭಿಯಾನ ಪ್ರಗತಿ ಮತ್ತು ಪರಿವರ್ತನೆಯ ಸಂಕೇತವಾಗಿದ್ದು ಇದೇ ಮಾದರಿಯಲ್ಲಿ ಬೆಳ್ಮ ಗ್ರಾಮದ ಎಲ್ಲಾ ಜನರ ಮನ ಮನೆಗಳಲ್ಲಿ ಸ್ವಚ್ಛತೆ, ಜಲಜಾಗೃತಿ, ಸೌರಶಕ್ತಿ, ಅಭಿವೃದ್ಧಿ ಅಭಿಯಾನ ನಡೆದರೆ ಬೆಳ್ಮ ಗ್ರಾ.ಪಂ. ದೇಶದ ಮಾದರಿ ಗ್ರಾ.ಪಂ. ವಾಗಬಹುದೆಂದರು.
ಸ್ಥಳೀಯ ಮುಖಂಡರಾದ ವಿಜಯ ತನ್ನ ಜಮೀನಿನಲ್ಲಿ ಬಾವಿಗಳು ಮತ್ತು ಇಂಗುಗುಂಡಿಗಳನ್ನು ರಚಿಸಿ ಮಾಡಿದ ನೆಲ ಜಲ ಸಂರಕ್ಷಣೆ ಕಾರ್ಯದ ಅನುಭವವನ್ನು ಹಂಚಿಕೊಂಡರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಸದಸ್ಯರಾದ ಸತೀಶ್, ಹಸೈನಾರ್, ಮಾಜಿ ಅಧ್ಯಕ್ಷೆ ಗುಣವತಿ, ಕಾರ್ಯದರ್ಶಿ ಬಾಲಕೃಷ್ಣ ಗಟ್ಟಿ, ಸ್ಥಳೀಯರಾದ ಮೋಹನ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ಮನೆಯಂಗಳ ಮಾಹಿತಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.