×
Ad

ಜುಲೈ 27ರವರೆಗೆ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ನೋಂದಣಿ

Update: 2016-05-24 23:40 IST

ಬೆಳ್ತಂಗಡಿ, ಮೇ 24: ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ನೊಂದಣಿ ಮೇ 3ರಿಂದ ಆರಂಭವಾಗಿದ್ದು ಜು. 27ರಂದು ಕೊನೆಗೊಳ್ಳಲಿದೆ. ಮೇ 28 ಕ್ಕೆ ಮೊದಲು ನೋಂದಣೆ ಮಾಡುವವರು ಜೂ.1 ರಿಂದ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಈಗಾಗಲೇ ಇರುವ ಕಾಯಿಲೆಗಳಿಗೆ ಅನ್ವಯಿಸುವ ಅತೀ ದೊಡ್ಡ ವಿಮಾ ರಹಿತ, ಸರಕಾರೇತರ ಸಂಸ್ಥೆಯಿಂದ ನಡೆಸಲ್ಪಡುವ ಯೋಜನೆಯಾಗಿದೆ ಎಂದು ಕೆ.ಎಂ.ಸಿ. ಆಸ್ಪತ್ರೆಯ ಹಿರಿಯ ಪ್ರಬಂಧಕ ರವಿರಾಜ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಯೋಜನೆಯು ಮಣಿಪಾಲ ವಿಶ್ವವಿದ್ಯಾನಿಲಯದ ಸಾಮಾಜಿಕ ಕಳಕಳಿಯ ಪ್ರತೀಕವಾಗಿದ್ದು ಅತ್ಯಂತ ಕಡಿಮೆ ಹಾಗೂ ಅನುಕೂಲಕರ ವೆಚ್ಚದಲ್ಲಿ ಸದಸ್ಯರುಗಳು ಚಿಕಿತ್ಸಾ ಸೌಲಭ್ಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸದಸ್ಯತನ ಶುಲ್ಕದ ರೂಪದಲ್ಲಿ ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರೂ ಕೂಡಾ ಯೋಜನೆಯ ಸದಸ್ಯರಾಗಬಹುದು. ಇದರ ಬಳಕೆಗೆ ಗರಿಷ್ಠ ಮಿತಿ ಹಾಗೂ ವಯಸ್ಸಿನ ಮಿತಿ ಇರುವುದಿಲ್ಲ. ಆರೋಗ್ಯ ಕಾರ್ಡ್ 16ನೆ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು 2 ಲಕ್ಷ ಸದಸ್ಯರನ್ನು ಸೇರಿಸುವ ಗುರಿ ಹೊಂದಿದೆ. ಮಣಿಪಾಲ ಮತ್ತು ಅತ್ತಾವರದಲ್ಲಿ ತಜ್ಞ ವೈದ್ಯರ ಜೊತೆಗಿನ ತಪಾಸಣೆಗೆ ಶೇ. 50 ರಷ್ಟು ಪಾವತಿ ಮಾಡಬೇಕಾಗುವುದು. ಅತ್ತಾವರದಲ್ಲಿ ಒಪಿಡಿ ರಹಿತ ದಿನಗಳ ತಪಾಸಣಾ ಶುಲ್ಕದ ಮೇಲೆ ರಿಯಾಯಿತಿಯನ್ನು ನೀಡುವ ಯೋಜನೆ ಇದೊಂದೆ. ಡಯಾಗ್ನಸ್ಟಿಕ್ ಟೆಸ್ಟ್‌ಗಳು ಮತ್ತು ಪ್ರಯೋಗಾಲಯ ತಪಾಸಣೆಗೆ ಶೇ. 25, ಆಸ್ಪತ್ರೆಯಿಂದ ಖರೀದಿಸುವ ಔಷಧಿಗಳ ಮೇಲೆ ಶೇ. 10 ರಿಯಾಯತಿ ಸೌಲಭ್ಯ ಇದೆ ಎಂದರು.

ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಮತ್ತು ಕಾರ್ಕಳದಲ್ಲಿ ಯಾವುದೇ ತಜ್ಞ ವೈದ್ಯರ ತಪಾಸಣಾ ಶುಲ್ಕದ ಮೇಲೆ ಶೇ.20 ರಿಯಾಯತಿಯನ್ನು ಹೊರರೋಗಿ ಸೌಲಭ್ಯವಾಗಿ, ಒಳರೋಗಿಯ ಬಿಲ್ ಮೇಲೆ ಔಷಧಿಗಳನ್ನು ಹೊರತು ಪಡಿಸಿ ಶೇ. 15ರಷ್ಟು ರಿಯಾಯತಿ ಇರುತ್ತದೆ. ಪ್ರಸಕ್ತ ವರ್ಷದಲ್ಲಿ ಆಸ್ಪತ್ರೆಯ ಫಾರ್ಮಸಿಯಿಂದ ಎಷ್ಟೇ ಬಾರಿ ಔಷಧಿ ಖರೀದಿಸಿದರೂ ಶೇ.10 ರವರೆಗೆ ರಿಯಾಯತಿ ಪಡೆಯಬಹುದು.

ವೈಯಕ್ತಿಕ ಕಾರ್ಡ್‌ಗೆ 270 ರೂ. ಆಗಿದ್ದು ಕೌಟುಂಬಿಕ ಕಾರ್ಡ್‌ಗೆ ರೂ. 550 ಆಗಿದೆ. ಕಾರ್ಡ್‌ದಾರರು, ಸಂಗಾತಿ, 25 ವರ್ಷದೊಳಗಿನ ಮದುವೆಯಾಗದ ಅವಲಂಬಿತ ಮಕ್ಕಳು ಕುಟುಂಬದಾರರಾಗಿರುತ್ತಾರೆ. ಹೆತ್ತವರನ್ನು ಸೇರಿಸಲು ತಲಾ 100 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ ಎಂದರು. ಬೆಳ್ತಂಗಡಿಯಲ್ಲಿ ಕಾರ್ಡ್ ಪಡೆಯುವವರು ಸುದ್ದಿ ಸೆಂಟರ್ ಸಂತೆಕಟ್ಟೆ, ಶಕ್ತಿ ಮೆಡಿಕಲ್ ಬೆಳ್ತಂಗಡಿ, ಸಿಂಡಿಕೇಟ್ ಬ್ಯಾಂಕಿನ ಶಾಖೆಗಳಲ್ಲಿ ಪಡೆಯಬಹುದು ಎಂದರು.

ಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಜಯರಾಮ್, ಮಾರ್ಕೆಟಿಂಗ್ ಅಧಿಕಾರಿ ಲವಿನ್, ಸಿಂಡಿಕೇಟ್ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಪ್ರಬಂಧಕ ಸೂರ್ಯನಾರಾಯಣ ಭಟ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News