×
Ad

ಆರ್‌ಟಿಇ ಸೀಟು ಹಂಚಿಕೆ: ಒಂದು ಕಿ.ಮೀ. ವ್ಯಾಪ್ತಿಗೆ ಪರಿಗಣಿಸಲು ಸೂಚನೆ

Update: 2016-05-24 23:42 IST

ಮಂಗಳೂರು, ಮೇ 24: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ನೆರೆಹೊರೆಯ ವ್ಯಾಖ್ಯಾನವನ್ನು ವಾರ್ಡ್ ವ್ಯಾಪ್ತಿಗೆ ಸೀಮಿತಗೊಳಿಸದೆ ಶಾಲೆಯಿಂದ 1 ಕಿ.ಮೀ. ವ್ಯಾಪ್ತಿ ಎಂದು ಪರಿಗಣಿಸಿ ಈಗಾಗಲೇ ಸೀಟು ಹಂಚಿಕೆಯಾಗಿರುವ ಅರ್ಜಿಗಳನ್ನು ಸಂಬಂಧಿಸಿದ ಶಾಲೆಗಳಿಗೆ ದಾಖಲಾತಿಗಾಗಿ ಪರಿಗಣಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಅವರು, ಸಮೀಪದಲ್ಲೆ ಶಾಲೆ ಇದ್ದರೂ ವಾರ್ಡ್‌ನ ಹೊರಗೆ ವಾಸಿಸುತ್ತಿದ್ದಾರೆ ಎಂಬ ಕಾರಣದಿಂದ ಪ್ರವೇಶಾತಿ ನಿರಾಕರಣೆ ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಆಯುಕ್ತರು ವಾರ್ಡ್ ವ್ಯಾಪ್ತಿಗೆ ಸೀಮಿತಗೊಳಿಸದೆ ಶಾಲೆಯಿಂದ 1 ಕಿ.ಮೀ. ವ್ಯಾಪ್ತಿ ಎಂದು ಪರಿಗಣಿಸುವ ಸೂಚನೆ ನೀಡಿದ್ದಾರೆ ಎಂದವರು ವಿವರಿಸಿದರು.
*ದಾಖಲಾತಿ ಗಡುವು ವಿಸ್ತರಣೆ
ಶಿಕ್ಷಣ ಹಕ್ಕು ಕಾಯ್ದೆಯಡಿ ಮೇ 7ರಂದು ನಡೆಸಿದ ಮೊದಲನೆ ಹಂತದ ಆನ್‌ಲೈನ್ ಲಾಟರಿ ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆಯಾದ ಮಕ್ಕಳನ್ನು ನಿಗದಿತ ವ್ಯಾಪ್ತಿ ಯಲ್ಲಿ ನೆರೆಹೊರೆಯ ಶಾಲೆಗಳಿಗೆ ದಾಖಲು ಮಾಡಲು ನಿಗದಿಪಡಿಸಿದ್ದ ಮೇ 23ರ ಗಡುವನ್ನು ಮೇ 25ರವರೆಗೆ ವಿಸ್ತರಿಸ ಲಾಗಿದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ ತಿಳಿಸಿದರು. ನೆರೆಹೊರೆಯ ಶಾಲೆಗಳಿಗೆ ಸೀಟು ಹಂಚಿಕೆಯಾಗಿರುವ ಕಾರಣಕ್ಕಾಗಿ ಅರ್ಜಿ ತಿರಸ್ಕರಿಸಲ್ಪಟ್ಟಿದ್ದಲ್ಲಿ ಅಂತಹ ಅರ್ಜಿದಾರರು ಆತಂಕಪಡುವ ಆವಶ್ಯಕತೆ ಇಲ್ಲ. ಅಂತಹ ಅರ್ಜಿದಾರರಿಗೆ ಮೇ 25ರ ನಂತರ ವ್ಯಾಪ್ತಿಯೊಳಗಿನ ನೆರೆಹೊರೆಯ ಶಾಲೆಗೆ ಈಗಾಗಲೇ ಸಲ್ಲಿಸಿರುವ ಅರ್ಜಿಯಲ್ಲಿ ಶಾಲೆಗಳ ಹೆಸರನ್ನು ಪರಿಷ್ಕರಿಸಿ ತಂತ್ರಾಂಶದಲ್ಲಿ ನಮೂದಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗುವುದು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News