×
Ad

ಸಚಿವ ಖಾದರ್‌ರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ: ಕಾಂಗ್ರೆಸ್‌

Update: 2016-05-24 23:59 IST

ಉಳ್ಳಾಲ, ಮೇ 24: ತನ್ನ ಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಈಗಾಗಲೇ ಸಚಿವ ಖಾದರ್ ಹೇಳಿದ್ದಾರೆ. ಆದರೂ ಉಳ್ಳಾಲದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ನಂ-1 ಸಚಿವರ ತೇಜೋವಧೆಗೆ ಪ್ರಯತ್ನ ಮಾಡುತ್ತಿದೆ. ಉಳ್ಳಾಲದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲದಿದ್ದರೂ ಈ ರೀತಿಯ ಸುಳ್ಳಾರೋಪ ಹೊರಿಸಲಾಗುತ್ತದೆ. ಆದರೆ ಖಾದರ್ ಜನರ ಮನದಲ್ಲಿದ್ದು, ಬಿಜೆಪಿ ಕೇವಲ ಪ್ರತಿಭಟನೆ, ಸುದ್ದಿಗೋಷ್ಠಿಗೆ ಮಾತ್ರ ಸೀಮಿತವಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ವ್ಯಂಗ್ಯವಾಡಿದರು.

ಮಂಗಳವಾರ ತೊಕ್ಕೊಟ್ಟಿನಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸೋಮವಾರ ಬಿಜೆಪಿ ನಡೆಸಿರುವ ಪ್ರತಿಭಟನೆಯಲ್ಲಿ ಯು.ಟಿ.ಖಾದರ್ ಸಹೋದರ ಇಫ್ತಿಕಾರ್‌ರನ್ನು ಮಂಪರು ಪರೀಕ್ಷೆ ಮಾಡಬೇಕು ಎಂದು ಹೇಳಿರುವ ರಹೀಂ ಉಚ್ಚಿಲ್‌ರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಬ್ಯಾರಿ ಸಾಹಿತ್ಯ ಅಕಾಡಮಿಯಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭ ಮಾಡಿದ ಹಗರಣ ಬೆಳಕಿಗೆ ಬರಬಹುದು ಎಂದು ಹೇಳಿದರು. ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಸುಲೋಚನಾ ಭಟ್ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಅದೇ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ನೀಲಿಚಿತ್ರ ವೀಕ್ಷಿಸಿದಾಗ ರಾಜೀನಾಮೆ ಕೇಳದಿದ್ದರೂ, ತೊಕ್ಕೊಟ್ಟಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಖಾದರ್‌ರ ರಾಜೀನಾಮೆ ಕೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಮುಖ್ಯಮಂತ್ರಿ, ಸಚಿವರು, ಜೈಲಿಗೆ ಹೋಗಿ ಬಂದಿದ್ದು, ಬಿಜೆಪಿಗರಿಗೆ ಸಚಿವ ಖಾದರ್‌ರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುರ್ರಹ್ಮಾನ್ ಕೋಡಿಜಾಲ್, ಸುರೇಶ್ ಭಟ್ನಗರ, ಮುಖಂಡ ಶ್ರೀನಿವಾಸ್ ಶೆಟ್ಟಿ ಅಸೈಗೋಳಿ ಹಾಗೂ ತಾಪಂ ಸದಸ್ಯ ಸಿದ್ದೀಕ್ ತಲಪಾಡಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News