×
Ad

ಸಿಮ್ ಕಾರ್ಡ್ ನುಂಗಿದ ಬಾಲಕಿ!

Update: 2016-05-25 10:34 IST

ತ್ರಿಶೂರ್‌, ಮೇ 25: ಮೊಬೈಲ್‌ನಲ್ಲಿ ಇರಬೇಕಾದ ಸಿಮ್‌ ಕಾರ್ಡ್‌ ಶ್ವಾಸಕೋಶದಲ್ಲಿದ್ದರೆ ಏನಾಗಬಹುದು ? 

ತ್ರಿಶೂರ್ ಮುಂಡೂರಿನ ಅಶ್ವತಿ (16) ಹಲ್ಲಿನಲ್ಲಿ ಕಚ್ಚಿ ಹಿಡಿದಿದ್ದ ಸಿಮ್‌ ಕಾರ್ಡ್‌ ಆಕಸ್ಮಿಕವಾಗಿ ಒಳಹೋಯಿತು. ಸಿಟಿ ಸ್ಕ್ಯಾನ್‌ನಿಂದ ಸಿಮ್‌ಕಾರ್ಡ್‌ ಶ್ವಾಸಕೋಶದೊಳಗೆ ಸಿಲುಕಿರುವುದು ಪತ್ತೆಯಾಯಿತು.

ಶಸ್ತ್ರಚಿಕಿತ್ಸೆ ಮೂಲಕ ಸಿಮ್‌ ಕಾರ್ಡ್‌ ತೆಗೆಯಬಹುದಾದರೂ, ಎದೆಯ ಎಲುಬಿಗೆ ಸ್ವಲ್ಪ ಹಾನಿಯಾದರೂ ಪ್ರಾಣವೇ ಹೋಗುವ ಸಾಧ್ಯತೆ ಇದ್ದ ಕಾರಣ ಬ್ರ್ಯಾಂಕೋಸ್ಕೋಪಿ ಮೂಲಕ ಸಿಮ್‌ ಕಾರ್ಡ್‌ ಹೊರತೆಗೆದ ವೈದ್ಯರು ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. 

ಆಗಿದ್ದೇನು ?

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಚುನಾವಣಾ ಫಲಿತಾಂಶ ಕುರಿತ ಚರ್ಚೆಯನ್ನು ವೀಕ್ಷಿಸುತ್ತಿದ್ದ ಅಶ್ವತಿ, ಪೋಷಕರ ಜತೆ ಇದೇ ವಿಚಾರವಾಗಿ ಬಿರುಸಿನ ಚರ್ಚೆ ನಡೆಸಿದ್ದಳು. ಈ ಮಧ್ಯೆ, ಮೊಬೈಲ್‌ ಸಿಮ್‌ ಕಾರ್ಡ್‌ ಬದಲಿಸುತ್ತಿದ್ದ ಬಾಲಕಿ ಮಾತಿನ ಭರದಲ್ಲಿ ಹಲ್ಲಿನಲ್ಲಿ ಕಚ್ಚಿ ಹಿಡಿದಿದ್ದ ಸಿಮ್‌ ಕಾರ್ಡ್‌ ನುಂಗಿದ್ದಳು.

ಗಾಬರಿಗೊಳ್ಳದ ಹುಡುಗಿ ಹೊಟ್ಟೆ ತುಂಬ ಉಂಡರೆ ಮಲದ ಜತೆಗೆ ಸಿಮ್‌ ಕಾರ್ಡ್‌ ಹೊರಬರಬಹುದು ಎಂದು ಭಾವಿಸಿ ಸೇಬು, ಬಾಳೆ ಹಣ್ಣು ಮುಂತಾದ ಹಣ್ಣುಗಳನ್ನು ಸೇವಿಸಿದಳು. ಕೊನೆಗೆ ಹೊಟ್ಟೆ ತುಂಬ ಊಟವನ್ನೂ ಮಾಡಿದಳು. ಆದರೆ, ಪ್ರಯೋಜನ ಆಗಲಿಲ್ಲ. ಸಂಜೆ ವೇಳೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು.

ಉಸಿರಾಟದ ಸಮಸ್ಯೆ ಬಳಲುತ್ತಿದ್ದ ಆಕೆಯನ್ನು ತ್ರಿಶೂರಿನ ಅಮಲಾ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಿಟಿ ಸ್ಕ್ಯಾನ್‌ ನಿಂದ ಶ್ವಾಸಕೋಶದಲ್ಲಿ ಸಿಮ್‌ ಕಾರ್ಡ್‌ ಇರುವುದನ್ನು ಪತ್ತೆ ಮಾಡಿದ ವೈದ್ಯರು ಬ್ರ್ಯಾಂಕೋಸ್ಕೋಪಿ ನಡೆಸಿ ಶ್ವಾಸಕೋಶದಿಂದ ಸಿಮ್‌ ಕಾರ್ಡ್‌ಅನ್ನು ಹೊರ ತೆಗೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News