ಉಡುಪಿ: ಮೂರು ವರ್ಷಗಳ ಸಾಧನೆಯ ಪುಸ್ತಕ ಬಿಡುಗಡೆ
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಮೂರುಸಾವಿರ ಕೋಟಿ ರೂ.- ಸೊರಕೆ
ಉಡುಪಿ, ಮೇ 25: ರಾಜ್ಯ ಸರಕಾರಕ್ಕೆ ಮೂರು ವರ್ಷ ತುಂಬಿದ ಸುಸದಂರ್ಭದಲ್ಲಿ ರಾಜ್ಯದ ಪ್ರಗತಿಯ ವೇಗಕ್ಕೆ ಪೂರಕವಾಗಿ ಉಡುಪಿ ಜಿಲ್ಲೆ ಮುಂದುವರಿದಿದ್ದು ರಾಜ್ಯದಲ್ಲೇ ಉಡುಪಿಯನ್ನು ಮಾದರಿಯಾಗಿಸಲು ಮೂರು ವರ್ಷಗಳಲ್ಲಿ 3,000 ಕೋಟಿ ರೂ.ಗಳ ಅನುದಾನ ಸದ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಪ್ರೆಸ್ ಕ್ಲಬ್‌ನಲ್ಲಿ ಮೂರು ವರ್ಷ ಸಂಪೂರ್ಣಗೊಂಡ ಸಂದರ್ಭದಲ್ಲಿ ರಾಜ್ಯದ ಸಾಧನೆ, ನಗರಾಭಿವೃದ್ಧಿ ಇಲಾಖೆ ಸಾಧನೆ, ಜಿಲ್ಲೆಯ ಸಾಧನೆ ಪುಸ್ತಕಗಳ ಬಿಡುಗಡೆ ಮಾತನಾಡುತ್ತಿದ್ದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯತ್ನ, ಅಂತರ್ಜಲ ಮಟ್ಟ ಏರಿಕೆ ನಿಟ್ಟಿನಲ್ಲಿ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನಕ್ಕೆ ಕ್ರಮ, ರೈತರ ಸಮಸ್ಯೆ ಪರಿಹಾರಕ್ಕೆ ಕ್ರಮ ಇತ್ಯಾದಿ ಹಮ್ಮಿಕೊಳ್ಳಲಾಗಿದೆ. ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಜನಸಾಮಾನ್ಯರ ಜೀವನ ಮಟ್ಟವನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕೃಷಿ ಇಲಾಖೆಯ ಭೂ ಸಮೃದ್ಧಿ ಯೋಜನೆ ಅನುಷ್ಠಾನಕ್ಕೆ 225.38 ಲಕ್ಷ, ಮಣ್ಣು ಆರೋಗ್ಯ ಅಭಿಯಾನದಡಿ 6,308 ಮಣ್ಣು ಪರೀಕ್ಷೆ ಮಾದರಿ ಪರೀಕ್ಷೆ, ಕೃಷಿ ಯಂತ್ರೋಪಕರಣ ಖರೀದಿಗೆ 130.6 ಲಕ್ಷ ಸಹಾಯಧನ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯಡಿ 321.41 ಕೋ. ವೆಚ್ಚದಲ್ಲಿ ರಸ್ತೆ, ಸೇತುವೆ ನಿರ್ಮಾಣ ಇತ್ಯಾದಿ ಹಮ್ಮಿಕೊಳ್ಳಲಾಗಿದೆ. ಆಹಾರ ಇಲಾಖೆಯಲ್ಲಿ 1,33,697 ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ 1,250 ರೈತರಿಗೆ 2.96 ಲಕ್ಷ ರೂ. ಅನುದಾನದಲ್ಲಿ ತಾಂತ್ರಿಕ ಮಾಹಿತಿ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ 193.04 ಲಕ್ಷ ರೂ. ಅನುದಾನ, ಮಧುವನ ಯೋನೆಯಡಿ 219 ರೈತರಿಗೆ ಜೇನುಸಾಕಣೆಗಾಗಿ 11.59 ಲಕ್ಷ ರೂ. ಸಹಾಯಧನ ನೀಡಲಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯಡಿ 134 ಪರಿಶಿಷ್ಟ ಜಾತಿ/ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಜೀವನ ಕಲ್ಪಿಸಲು 1.06 ಕೋ. ರೂ. ಸಹಾಯ ಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲಾಗಿದೆ. ಸುಮಾರು 3 ಕೋ. ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಪ್ರವಾಸಿ ತಾಣಗಳ ಕೂಡುರಸ್ತೆ ಅಭಿವೃದ್ಧಿಗೆ 23 ಕೋ. ರೂ. ವ್ಯಯಿಸಿ 24 ಕಾಮಗಾರಿ ನಿರ್ವಹಿಸಲಾಗಿದೆ. ಜಿಲ್ಲೆಯ 5 ಪ್ರಮುಖ ಬೀಚ್‌ಗಳಿಗೆ 9.13 ಕೋ. ರೂ. ಅನುದಾನ ಕಲ್ಪಿಸಲಾಗಿದೆ ಎಂದರು.
ಮೀನುಗಾರಿಕೆ ಇಲಾಖೆಯಲ್ಲಿ 165 ಕೋ. ರೂ. ಅನುದಾನದಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ, 1,750 ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ವಿನಾಯಿತಿ, ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯನ್ನು 2 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಮಗ್ರ ಅಭಿವೃದ್ಧಿಗೆ ಕ್ರಮ, ಸಾರ್ವಜನಿಕ ಶಿಕ್ಷಣ ಇಲಾಖೆಯಡಿ 93 ಸಾವಿರ ಮಕ್ಕಳಿಗೆ 7,929.6 ಲಕ್ಷ ರೂ.ಗಳನ್ನು ಅಕ್ಷರದಾಸೋಹ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗಿದೆ. ಶೂ- ಸಾಕ್ಸ್ ವಿತರಣೆಗೆ 145.69 ಲಕ್ಷ, 59,665 ಮಕ್ಕಳ ಬ್ಯಾಗು ವಿತರಣೆಗೆ 10.66 ಲಕ್ಷ ರೂ. ವಿನಿಯೋಗಿಸಲಾಗಿದೆ. ಆರ್‌ಟಿಇಯಡಿ 2,570 ಮಕ್ಕಳಿಗೆ 436.94 ಲಕ್ಷ ರೂ. ಪಾವತಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಇತ್ಯಾದಿಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ನಗರಾಭಿವೃದ್ಧಿ ಇಲಾಖೆ:
ತಮ್ಮದೇ ಇಲಾಖೆಯಾದ ನಗರಾಭಿವೃದ್ಧಿ ಇಲಾಖೆಯಲ್ಲೂ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಕಾಪುವನ್ನು ಪುರಸಭೆಯನ್ನಾಗಿಸಿ ಮೂಲಭೂತ ಸೌಕರ್ಯ ವೃದ್ಧಿಗೆ 15 ಕೋ., 3 ಕೋ. ವಿಶೇಷ ಅನುದಾನ, ಕುಡಿಯುವ ನೀರಿಗಾಗಿ 93 ಲಕ್ಷ ರೂ. ಅನುದಾನ ಕಲ್ಪಿಸಲಾಗಿದೆ. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಲು ಕ್ರಮ ವಹಿಸಲಾಗಿದೆ.
ರಾಜ್ಯದ ಮೂರು ನಗರಸಭೆಗಳನ್ನು ಮಹಾನಗರಪಾಲಿಕೆಯನ್ನಾಗಿಸಲಾಗಿದ್ದು, 57 ಗ್ರಾ. ಪಂ.ಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಮತ್ತು 15 ಪಟ್ಟಣ ಪಂಚಾಯತ್‌ಗಳನ್ನು ಪುರಸಭೆ ಹಾಗೂ 15 ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪೌರ ಕಾರ್ಮಿಕರ ವೇತನ ಹೆಚ್ಚಳ ಮತ್ತು ನೇರ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಗೃಹಭಾಗ್ಯ ಯೋಜನೆ ಜಾರಿಗೆ ತರಲಾಗಿದೆ ಎಂದರು.
ರಾಜ್ಯ ಸರ್ಕಾರದ ಮಾರ್ಗದರ್ಶನದಡಿ ಎಲ್ಲ ಇಲಾಖೆಗಳಲ್ಲಿ ಕಾರ್ಯಕ್ರಮ ರೂಪಿಸಿರುವುದಾಗಿ ಸಚಿವ ಸೊರಕೆ ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ನಗರಾಭಿವೃದ್ಧಿ ಇಲಾಖೆ ಕಾರ್ಯಕ್ರಮಗಳ ಯಾದಿ ಅನಾವರಣಗೊಳಿಸಿದರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಸಕ ಗೋಪಾಲ ಪೂಜಾರಿ ಜಿಲ್ಲಾ ಅಭಿವೃದ್ಧಿ ಯೋಜನೆಗಳ ಪಟ್ಟಿ ಬಿಡುಗಡೆ ಮಾಡಿದರು.
ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸಲು ಕ್ರಮ
ಕಳೆದ ಮೂರು ವರ್ಷದ ಕಾಂಗ್ರೆಸ್ ಸರ್ಕಾರ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರೂ ಅದು ಇನ್ನೂ ಜನತೆಗೆ ತಲುಪಿಲ್ಲ. ಅದನ್ನು ತಳಮಟ್ಟದ ಮಂದಿಗೆ ತಲುಪಿಸುವಲ್ಲಿ ಪಕ್ಷ ಶ್ರಮಿಸುತ್ತದೆ.
ಅಧಿಕಾರದಲ್ಲಿದ್ದ ಜನಪ್ರತಿನಿಧಿ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕೇ ವಿನಾಃ ಇತರ ಕಾರ್ಯಗಳತ್ತ ಅಲ್ಲ ಎಂದೂ ಹೇಳಿದರು.
ಬ್ರಹ್ಮಾವರ ಸಕ್ಕರರೆ ಕಾರ್ಖಾನೆಯ ಪುನಶ್ಚೇತನ ಬಗ್ಗೆ ಸ್ಥಳೀಯ ರೈತರು ಆಸಕ್ತಿ ವಹಿಸಿದ್ದರೂ, ಸಂಸ್ಥೆಯ ಲಾಭಾಲಾಭಗಳ ಬಗ್ಗೆ ತಜ್ಞರ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಕಾಪು ದಿವಾಕರ ಶೆಟ್ಟಿ, ಹರೀಶ್ ಕಿಣಿ, ನಾಗೇಶ್ ಉದ್ಯಾವರ, ಮುರಳೀ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.